ಮೆಲ್ಬೋರ್ನ್: ನ್ಯೂಜಿಲ್ಯಾಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲೆಸ್ ಪೆರ್ರಿ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಕಿವೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ಪೆರ್ರಿ ಫೀಲ್ಡಿಂಗ್ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಪಂದ್ಯದಿಂದ ಅರ್ಧದಲ್ಲೇ ಹೊರ ನಡೆದಿದ್ದರು. ಆದರೆ ಈ ಪಂದ್ಯವನ್ನು ಆಸೀಸ್ 4 ರನ್ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿವಲ್ಲಿ ಯಶಸ್ವಿಯಾಗಿತ್ತು.
ಗಾಯಗೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದ ಪೆರ್ರಿ ಸೆಮಿಫೈನಲ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದಿ ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ಸೈಟ್ ವರದಿ ಮಾಡಿದೆ. ಗಾಯಕ್ಕೊಳಗಾಗುವ ಮುನ್ನ ಪೆರ್ರಿ 15 ಎಸೆತಗಳಲ್ಲಿ 21 ರನ್ ಹಾಗೂ 2 ಓವರ್ ಬೌಲಿಂಗ್ ಕೂಡ ಮಾಡಿದ್ದರು.
ಪೆರ್ರಿ ಅವರು ಮಹಿಳೆಯರ ಬಿಗ್ಬ್ಯಾಶ್ನಲ್ಲಿ ಫೀಲ್ಡಿಂಗ್ ವೇಳೆ ಬಲ ಬುಜದ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದರು. ನಂತರ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಮಾಡಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಇದೀಗ ಮತ್ತೆ ಗಾಯಗೊಂಡಿರುವುದು ನಿಜಕ್ಕೂ ಹಾಲಿ ಚಾಂಪಿಯನ್ನರಿಗೆ ಭಾರಿ ಆಘಾತವಾಗಿದೆ. ಪೆರ್ರಿ ಬದಲು ಡೆಲಿಸಾ ಕಿಮ್ಮನ್ಸ್ 11ರ ಬಳಗ ಸೇರಿಕೊಳ್ಳುವ ಸಾಧ್ಯತೆ ಇದೆ.