ಪೋರ್ಟ್ ಆಪ್ ಸ್ಪೇನ್: ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಒಂದು ವರ್ಷದ ನಂತರ ಅವಕಾಶ ಗಿಟ್ಟಿಸಿರುವ ಶ್ರೇಯಸ್ ಅಯ್ಯರ್ ಭಾರತ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವ ಗುರಿ ಹೊಂದಿದ್ದಾರೆ.
2017ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ತಾವಾಡಿದ ಎರಡನೇ ಪಂದ್ಯದಲ್ಲಿ 88 ರನ್ಗಳಿಸಿ ಮಿಂಚಿದ್ದರು. ನಂತರದ ಪಂದ್ಯದಲ್ಲೂ 65 ರನ್ಗಳಿಸಿದ ಅವರಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಅವಕಾಶ ಸಿಕ್ಕಿತ್ತು. ಆದ್ರೆ ಆಡುವ ಅವಕಾಶ ಸಿಕ್ಕಿದ್ದು ಎರಡೇ ಪಂದ್ಯದಲ್ಲಿ. ನಂತರ ಒಂದು ವರ್ಷ ವನವಾಸ ಎದುರಿಸಿ ಮತ್ತೆ ವಿಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.
ಭಾರತ ತಂಡದ ಪರ ಕಳೆದ 2-3 ವರ್ಷಗಳಲ್ಲಿ ಯಾರೂ ಖಾಯಂ ಆಗದ 4ನೇ ಕ್ರಮಾಂಕದ ಕಡೆ ನಿಮ್ಮ ಗಮನ ಇದೆಯಾ ಎಂದರೆ ಅಯ್ಯರ್, ಯುವ ಆಟಗಾರನಾಗಿ ನನಗೆ ಈ ಅವಕಾಶ ಪ್ರಮುಖವಾಗಿದೆ. ಒಂದು ವರ್ಷದ ನಂತರ ತಂಡಕ್ಕೆ ಸೇರ್ಪಡೆಗೊಂಡಿದ್ದೇನೆ. ಕ್ರಮಾಂಕದ ಬಗ್ಗೆ ಯೋಚನೆ ಮಾಡಬೇಕಾದರೆ ಹೆಚ್ಚಿನ ಅವಕಾಶ ಸಿಗಬೇಕು. ನನಗೆ ಈ ಸಮಯದಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದ್ದು, ಅದನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ತಂಡದಲ್ಲಿ ಯಾವ ಕ್ರಮಾಂಕದಲ್ಲಿ ನಾನು ಆಡಬೇಕೆಂಬುದನ್ನು ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರ ಮಾಡುತ್ತದೆ. ನಿರ್ಧಿಷ್ಠವಾಗಿ 4ನೇ ಕ್ರಮಾಂಕವೇ ಬೇಕೆಂಬ ಬಯಕೆಯಿಲ್ಲ. ಆದರೆ ಯಾವೊಬ್ಬ ಆಟಗಾರನು ಆ ಕ್ರಮಾಂಕದಲ್ಲಿ ಸ್ಥಿರತೆ ತೋರುತ್ತಿಲ್ಲವಾದ್ದರಿಂದ ಯುವ ಆಟಗಾರರನ್ನು ಪ್ರಯತ್ನಿಸಬೇಕು. ವೈಯಕ್ತಿಕವಾಗಿ ನಾನು 4ನೇ ಕ್ರಮಾಂಕದ ಆಕಾಂಕ್ಷಿಯಲ್ಲ. ತಂಡದ ಸನ್ನಿವೇಶಕ್ಕನುಗುಣವಾಗಿ ಯಾವ ಕ್ರಮಾಂಕದಲ್ಲಾದರೂ ಆಡುವುದಕ್ಕೆ ಸಿದ್ದನಿದ್ದೇನೆ, ಸಿಕ್ಕ ಅವಕಾಶವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಅಯ್ಯರ್, ವೆಸ್ಟ್ ಇಂಡೀಸ್ ಎ ವಿರುದ್ಧದ ಏಕದಿನ ಸರಣಿಯಲ್ಲಿ 187 ರನ್ಗಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್ಮನ್ ಆಗಿದ್ದರು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದೇ ಕ್ರಮಾಂಕಕ್ಕೆ ಕನ್ನಡಿಗರಾದ ರಾಹುಲ್, ಮನೀಷ್ ಪಾಂಡೆ ಹಾಗೂ ಪಂತ್ ಕೂಡ ಪ್ರಯತ್ನಿಸುತ್ತಿದ್ದಾರೆ.