ಇಂದೋರ್: ಭಾರತದ ಮೊದಲ ಮಹಿಳಾ ಕ್ರಿಕೆಟ್ ನಿರೂಪಕಿ ಹಾಗೂ ಭಾರತದ ಮೊದಲ ಟೆಸ್ಟ್ ನಾಯಕ ಸಿ.ಕೆ. ನಾಯ್ಡು ಅವರ ಪುತ್ರಿ ಚಂದ್ರಾ ನಾಯ್ಡು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.
1977 ರಲ್ಲಿ ಇಂದೋರ್‌ನಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಬಾಂಬೆ (ಈಗಿನ ಮುಂಬೈ) ಮತ್ತು ಎಂಸಿಸಿ ನಡುವಿನ ಪಂದ್ಯದ ವೇಳೆ ಚಂದ್ರಾ ಅವರ ಮೊದಲ ಕಮೆಂಟರಿ ನೀಡಿದ್ದರು. ಇವರು 1982 ರಲ್ಲಿ ಸಾಂಪ್ರದಾಯಿಕ ಲಾರ್ಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಗೋಲ್ಡನ್ ಜುಬಿಲಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಅಲ್ಲಿ ನಡೆದ ಸಭೆಯನ್ನುದ್ದೇಶಿಸಿಯೂ ಅವರು ಮಾತನಾಡಿದ್ದರು. ಆದರೆ, ಅವರು ದೀರ್ಘಕಾಲ ಕಮೆಂಟರಿ ಮಾಡಲಿಲ್ಲ. ಬದಲಿಗೆ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದರು.