ಲಖನೌ(ಉತ್ತರಪ್ರದೇಶ): ನಾಳೆಯಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ಏಕದಿನ ಸರಣಿ ಆರಂಭವಾಗುತ್ತಿದ್ದು, ಭಾರತದ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಅಭ್ಯಾಸ ಆರಂಭಿಸಿದೆ.
ನಾಳಿನ ಪಂದ್ಯದ ಬಗ್ಗೆ ಮಾತನಾಡಿರುವ ಏಕದಿನ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್, ದಕ್ಷಿಣ ಆಫ್ರಿಕಾದ ವಿರುದ್ಧ ಈ ಸರಣಿಯಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಿಸಲಿದ್ದೇವೆ. ಏಕೆಂದರೆ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ತಂಡವನ್ನು ತವರು ನೆಲದಲ್ಲಿಯೇ ಕ್ಲೀನ್ ಸ್ವೀಪ್ ಮಾಡಿದೆ. ಹಾಗಾಗಿ ನಾವು ಕಠಿಣ ಅಭ್ಯಾಸ ನಡೆಸುವ ಅನಿವಾರ್ಯತೆಯಿದೆ. ನಮ್ಮ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಲು ಸಂಪೂರ್ಣ ಉತ್ಸಾಹದಲ್ಲಿದೆ ಎಂದು ಕೌರ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಉತ್ತಮ ಕ್ರಿಕೆಟ್ ಆಡಿದೆ ಎಂದು ಒಪ್ಪಿಕೊಂಡರೂ ಕೌರ್, ದಕ್ಷಿಣ ಆಫ್ರಿಕಾ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.