ಸಿಡ್ನಿ:ಆಸೀಸ್ ನೆಲದಲ್ಲಿ ಮೊದಲು ಸೀಮಿತ ಓವರ್ಗಳ ಸರಣಿಯಿದ್ದರೂ ನಾಯಕ ಕೊಹ್ಲಿ ನೇತೃತ್ವದ ಭಾರತ ತಂಡ ಡಿಸೆಂಬರ್ನಲ್ಲಿ ಆರಂಭವಾಗುವ ಟೆಸ್ಟ್ ಸರಣಿಗೆ ಮಹತ್ವ ನೀಡಿದೆ ಎನ್ನವುದು ಖಚಿತವಾಗುತ್ತಿದೆ.
3 ಮಾದರಿಯ ಕ್ರಿಕೆಟ್ನಲ್ಲಿ ಅವಕಾಶ ಪಡೆದಿರುವ ಬ್ಯಾಟ್ಸ್ಮನ್ ಮತ್ತು ಬೌಲರ್ಗಳು ಮೈದಾನದಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಮಂಗಳವಾರ ಅಭ್ಯಾಸದ ಸಮಯದಲ್ಲಿ ನಾಯಕ ಕೊಹ್ಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕೆಂಪು ಚೆಂಡಿನಲ್ಲಿ ಬೌಲಿಂಗ್ ಮಾಡುವ ವಿಡಿಯೋವನ್ನು ಸ್ವತಃ ಕೊಹ್ಲಿಯೇ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ವಿಡಿಯೋ ತಲೆಬರಹದಲ್ಲಿ " ನಾನು ಟೆಸ್ಟ್ ಕ್ರಿಕೆಟ್ಗೆ ಆಭ್ಯಾಸ ಮಾಡುವುದನ್ನು ಇಷ್ಟಪಡುತ್ತೇನೆ" ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಹಾಗೂ 3 ಟಿ-20 ಪಂದ್ಯಗಳ ಸರಣಿಯನ್ನಾಡಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನವರಿಯಲ್ಲಿ ಜನ್ಮ ನೀಡುವ ನಿರೀಕ್ಷೆ ಹಿನ್ನೆಲೆ ಕೇವಲ ಒಂದು ಟೆಸ್ಟ್ ಆಡಿ ಭಾರತಕ್ಕೆ ಹಿಂತಿರುಗಲಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಐಪಿಎಲ್ನಲ್ಲಿ ಸಾಕಷ್ಟು ಪಂದ್ಯಗಳನ್ನಾಡಿರುವುದರಿಂದ ಸೀಮಿತ ಓವರ್ಗಳ ಸರಣಿಗಿಂತಲೂ ಟೆಸ್ಟ್ ಸರಣಿ ಮೇಲೆ ಆಟಗಾರರು ಗಮನ ನೀಡುತ್ತಿದ್ದಾರೆ. ಕೊಹ್ಲಿಯ ಜೊತೆಗೆ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಪಿಂಕ್ ಬಾಲ್ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.