ಮುಂಬೈ:ಏಪ್ರಿಲ್ 14ರವರೆಗೆ ಘೋಷಣೆಯಾಗಿದ್ದ ಲಾಕ್‍ಡೌನ್ ಮೇ.3ರವರೆಗೆ ವಿಸ್ತರಣೆಗೊಂಡಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಬಿಸಿಸಿಐ ಅನಿರ್ಧಿಷ್ಟಾವಧಿಗೆ ಮುಂದೂಡಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಮಾರ್ಚ್ 29ರಿಂದ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ 14ರವರೆಗೆ ಮುಂದೂಡಿಕೆಯಾಗಿತ್ತು. ಆದರೀಗ ದೇಶದಲ್ಲಿ ಲಾಕ್‍ಡೌನ್ ವಿಸ್ತರಣೆಯಾದ ಕಾರಣ ದಿನಾಂಕ ಘೋಷಣೆ ಮಾಡದೆ ಬಿಸಿಸಿಐ ತನ್ನ ಮಿಲಿಯನ್ ಡಾಲರ್ ಬೇಬಿಯನ್ನು ಕೈಯಲ್ಲೆತ್ತಿ ಮುದ್ದಾಡೋಕೆ ಮನಸ್ಸು ಮಾಡ್ತಿಲ್ಲ.
ಈ ವಿಚಾರವಾಗಿ ಫ್ರಾಂಚೈಸಿಗಳೊಂದಿಗೆ ಭಾರತೀಯ ಕ್ರಿಕೆಟ್ ಮಂಡಳಿ ವಿಡಿಯೋ ಸಂವಾದ ನಡೆಸಲಿದ್ದು, ಇದಾದ ಬಳಿಕ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯೂ ಕಾಣುತ್ತಿದೆ. ಜತೆಗೆ ಟೂರ್ನಿ ರದ್ದು ಮಾಡುವ ಮಾತು ಸಹ ಕೇಳಿ ಬಂದಿದೆ. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಟಿ-20 ವಿಶ್ವಕಪ್ ನಡೆಯಲಿರುವ ಕಾರಣ ಜೂನ್ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸುವ ಇರಾದೆ ಬಿಸಿಸಿಐ ಮುಂದೆ ಇದೆ.
ಪ್ರಪಂಚದಲ್ಲಿ ಕೊರೊನಾ ವೈರಸ್ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಏಪ್ರಿಲ್ 15ರಂದು ಕೊನೆಗೊಳ್ಳಬೇಕಿದ್ದ ಲಾಕ್‍ಡೌನ್ ಮೇ. 3ರವರೆಗೂ ವಿಸ್ತರಣೆಗೊಂಡಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ರಂದು ನಡೆಯಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿತ್ತು. ಆದರೆ ದೇಶದಲ್ಲಿ ಕೊರೊನಾ ಆತಂಕ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿ ಟೂರ್ನಿ ನಡೆಯುತ್ತೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೇದ ಕೆಲ ದಿನಗಳ ಹಿಂದೆ ಮಾತನಾಡಿದ್ದ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ, ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದರು.