ಆಕ್ಲೆಂಡ್ (ನ್ಯೂಜಿಲ್ಯಾಂಡ್): 59, 51, 54, 56, 58*...ಇವು ಇಂದು ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಎರಡೂ ತಂಡಗಳಿಂದ ಮೂಡಿಬಂದ ಅರ್ಧ ಶತಕಗಳು! ಈ ಅರ್ಧಶತಕಗಳಲ್ಲಿ ಕಿವೀಸ್ ಮೇಲುಗೈ ಸಾಧಿಸಿದ್ದರೂ ಗೆಲುವು ಮಾತ್ರ ಭಾರತದ್ದಾಯಿತು. ಅಲ್ಲದೆ, ಅತಿ ಹೆಚ್ಚು (4) ಬಾರಿ 200 ರನ್ಗೂ ಹೆಚ್ಚು ಟಾರ್ಗೆಟ್ ಮಾಡಿ ಗೆದ್ದ ದಾಖಲೆಗೂ ಪಾತ್ರವಾಯಿತು. ಆಸ್ಟ್ರೇಲಿಯಾ (2) ಎರಡನೇ ಸ್ಥಾನದಲ್ಲಿದೆ.
ಈಡನ್ ಪಾರ್ಕ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡಕ್ಕೆ ಭರ್ಜರಿ ಆರಂಭ ದೊರಕಿತು. ಆರಂಭಿಕ ಆಟಗಾರರಾದ ಮಾರ್ಟಿನ್ ಗಪ್ಟಿಲ್ (30) ಮತ್ತು ಕಾಲಿನ್ ಮನ್ರೋ (59) ಭದ್ರ ಬುನಾದಿ ಹಾಕಿದರು.
ಟೀಂ ಇಂಡಿಯಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಮೊದಲ ವಿಕೆಟ್ಗೆ 80 ರನ್ ಕಲೆಹಾಕಿತು. ಆರಂಭಿಕರಿಬ್ಬರೂ ಔಟಾದ ಬಳಿಕ ಕ್ರಿಸ್ಗೆ ಬಂದ ನಾಯಕ ಕೇನ್ ವಿಲಿಯಮ್ಸನ್ ಕೇವಲ 26 ಎಸೆತಗಳಲ್ಲಿ 10ನೇ ಅರ್ಧಶತಕ (51) ಹಾಗೂ ರಾಸ್ ಟೇಲರ್ 6ನೇ ಅರ್ಧಶತಕ (54*) ಪೂರೈಸಿದರು.
ಒಟ್ಟಾರೆ ಕಿವೀಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಭಾರತದ ಪರ ಬೂಮ್ರಾ, ಶಾರ್ದೂಲ್ ಠಾಕೂರ್, ಚಹಾಲ್, ಶಿವಂ ದುಬೆ, ಜಡೇಜಾ ತಲಾ 1 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.