ವಡೋದರ: ಒಂದೆಡೆ ಪುರುಷರ ತಂಡ ದಕ್ಷಿಣ ಆಫ್ರಿಕಾದ ಮೇಲೆ ಅಕ್ಷರಶಃ ಸವಾರಿ ಮಾಡಿದ್ದರೆ, ಅತ್ತ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ ನಿಗದಿತ 50 ಓವರ್ನಲ್ಲಿ ಆರು ವಿಕೆಟ್ ನಷ್ಟಕ್ಕೆ 247 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ದ.ಆಫ್ರಿಕಾ ಪರ ಲೌರಾ ವೋಲ್ವರ್ಡ್ 69, ಲಿಜೆಲ್ ಲೀ 40, ಮಿಗ್ನಾನ್ ಡು ಪ್ರೆಜ್ 44 ಹಾಗೂ ಲಾರಾ ಗೊಡಾಲ್ 38 ರನ್ ಬಾರಿಸಿದರು.ಭಾರತದ ಪರ ಶಿಖಾ ಪಾಂಡೆ, ಏಕ್ತಾ ಬಿಶ್ಟ್ ಹಾಗೂ ಪೂನಂ ಯಾದವ್ ತಲಾ 2 ವಿಕೆಟ್ ಹಂಚಿಕೊಂಡರು.
ಮಿಂಚಿದ ಪೂನಂ, ಮಿಥಾಲಿ:
248 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಪ್ರಿಯಾ ಪೂನಿಯಾ 20 ರನ್ನಿಗೆ ನಿರ್ಗಮಿಸಿದರು. ನಂತರದಲ್ಲಿ ಪೂನಂ ರಾವುತ್ 65 ಹಾಗೂ ನಾಯಕಿ ಮಿಥಾಲಿ ರಾಜ್ 66 ರನ್ ಗಳಿಸಿ ಗೆಲುವು ಸಾಧ್ಯವಾಗಿಸಿದರು.ಕೊನೆಯಲ್ಲಿ ಹರ್ಮನ್ಪ್ರೀತ್ ಕೌರ್ 27 ಎಸೆತದಲ್ಲಿ ಮಿಂಚಿನ 39 ರನ್ ಗಳಿಸಿ ಎರಡು ಓವರ್ ಇರುವಂತೆಯೇ ತಂಡಕ್ಕೆ ಗೆಲುವು ತಂದಿತ್ತರು.
ದ.ಆಫ್ರಿಕಾ ಪರ ಅಯಬೊಂಗಾ ಖಾಕ ಮೂರು ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯಿಲ್ ಹಾಗೂ ಮರಿಜಾನೆ ಕಪ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯವನ್ನು ಗೆಲ್ಲುವ ಮೂಲಕ ಮಿಥಾಲಿ ರಾಜ್ ಪಡೆ ಸರಣಿ ಕೈವಶ ಮಾಡಿಕೊಂಡಿದೆ. ಅಂತಿಮ ಏಕದಿನ ಪಂದ್ಯ ವಡೋದರಾದಲ್ಲಿ ಅ.14ರಂದು ನಡೆಯಲಿದೆ.