ಮೆಲ್ಬೋರ್ನ್:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇದೇ ಮೊದಲ ಬಾರಿಗೆ 174 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನೆಟ್ಟುವ ಮೂಲಕ ಸರಣಿಯಲ್ಲಿ ಫೈನಲ್ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮೆಲ್ಬೋರ್ನ್ನಲ್ಲಿ ನಡೆದ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 174 ರನ್ಗಳ ಬೃಹತ್ ಮೊತ್ತವನ್ನು ಕೌರ್ ಪಡೆ ಕೇವಲ 3 ವಿಕೆಟ್ ಕಳೆದುಕೊಂಡು 19.4 ಓವರ್ಗಳಲ್ಲಿ ಗುರಿ ತಲುಪುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಭಾರತದ ಪರ ಅಧಿಕ ಮೊತ್ತ ಚೇಸ್ ಮಾಡಿದ ದಾಖಲೆಗೆ ಪಾತ್ರವಾಯಿತು. ಅಲ್ಲದೆ ಅತಿ ಹೆಚ್ಚು ರನ್ ಚೇಸ್ ಮಾಡಿದ ವಿಶ್ವದ ಮೂರನೇ ತಂಡ ಎನಿಸಿಕೊಂಡಿತು. ಇದಕ್ಕು ಮೊದಲು ಭಾರತದ ವಿರುದ್ಧ ಇಂಗ್ಲೆಂಡ್ 199 ರನ್, ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಇಂಗ್ಲೆಂಡ್ ತಂಡವೇ 179 ರನ್ಗಳ ಮೊತ್ತವನ್ನು ಹಿಂಬಾಲಿಸಿ ಗೆಲುವು ದಾಖಲಿಸಿತ್ತು.
ತ್ರಿಕೋನ ಸರಣಿ ಫೈನಲ್ಗೇರಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆಶ್ಲೀ ಗಾರ್ಡ್ನರ್ ಅವರ 93, ಮೆಗ್ ಲ್ಯಾನಿಂಗ್ ಅವರ 37 ರನ್ಗಳ ಸಹಾಯದಿಂದ 173 ರನ್ಗಳಿಸಿತ್ತು. ಭಾರತದ ಪರ ದೀಪ್ತಿ ಶರ್ಮಾ 2, ರಾಜೇಶ್ವರಿ ಗಾಯಕವಾಡ್, ಹರ್ಲೀನ್ ಡಿಯೋಲ್, ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದರು.
174 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಮಂಧಾನ(55) ಹಾಗೂ ಶೆಫಾಲಿ (49) ಮೊದಲ ವಿಕೆಟ್ಗೆ 8 ಓವರ್ಗಳಲ್ಲಿ 85 ರನ್ಗಳ ಜೊತೆಯಾಟ ನೀಡಿದರು. 15 ವರ್ಷದ ಶೆಫಾಲಿ ಕೇವಲ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 49 ರನ್ಗಳಿಸಿದರೆ. ಮಂಧಾನ 48 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 55 ರನ್ಗಳಿಸಿ ಗೆಲುವಿನ ಭಾರತ ತಂಡವನ್ನು ಗೆಲುವಿನ ಸನಿಹ ತಂದು ಔಟಾದರು. ಮತ್ತೊಬ್ಬ ಯುವ ಆಟಗಾರ್ತಿ ಜಮೀಮಾ ರೋಡ್ರಿಗ್ಸ್ 19 ಎಸೆತಗಳಲ್ಲಿ 5 ಬೌಂಡರಿ ಸಹಿತ 30 ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ ಔಟಾಗದೇ 20, ದೀಪ್ತಿ ಶರ್ಮಾ ಔಟಾಗದೆ 11 ರನ್ಗಳಿಸಿ ದಾಖಲೆಯ ಜಯಕ್ಕೆ ಕಾರಣರಾದರು.
ಆಸ್ಟ್ರೇಲಿಯಾ ಪರ ಪೆರ್ರಿ , ನಿಕೋಲ ಕ್ಯಾರಿ ಹಾಗೂ ಮೇಗನ್ ಸ್ಕಟ್ ತಲಾ ಒಂದು ವಿಕೆಟ್ ಪಡೆದರು.
57 ಎಸೆತಗಳಲ್ಲಿ 11 ಬೌಂಡರಿ 3 ಸಿಕ್ಸರ್ ಸಹಿತ 93 ರನ್ಗಳಿಸಿದ ಆಸ್ಟ್ರೇಲಿಯಾ ಆಶ್ಲೀ ಗಾರ್ಡ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ಮಹಿಳೆಯರ ತಂಡ ಸರಣಿಯಲ್ಲಿ 4 ಪಂದ್ಯಗಳೊಂದಿಗೆ 2 ಗೆಲುವು ಹಾಗೂ 2 ಸೋಲಿನೊಂದಿಗೆ 4 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ತಂಡ 2 ಅಂಕಪಡೆದಿದ್ದು ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿದರೆ ಭಾರತ ತಂಡ ಫೈನಲ್ಗೇರಲಿದೆ. ಒಂದು ವೇಳೆ ಆಸ್ಟ್ರೇಲಿಯಾ ಗೆದ್ದರೆ ರನ್ರೇಟ್ ಆಧಾರದ ಮೇಲೆ ಭಾರತವನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಲಿದೆ.