ವಡೋದರ: ಭಾರತ ಪುರುಷರ ತಂಡ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವಶಪಡಿಸಿಕೊಂಡರೆ, ಇಂದು ಮಹಿಳೆಯರ ತಂಡ ಏಕದಿನ ಸರಣಿಯನ್ನು 3-0ಯಲ್ಲಿ ಗೆಲುವು ಸಾಧಿಸಿದೆ.
ವಡೋದರಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ವನಿತೆಯರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 146 ರನ್ಗಳಿಸಿದ್ದರು. ಹರ್ಮನ್ ಪ್ರೀತ್ ಕೌರ್ 36 ಹಾಗೂ ಶಿಖಾ ಪಾಂಡೆ 35 ರನ್ಗಳಿಸಿ ತಂಡದ ಮೊತ್ತವನ್ನು 100 ಗಡಿದಾಟಿಸಿದ್ದರು.
ಉತ್ತಮ ಬೌಲಿಂಗ್ ದಾಳಿ ನಡೆಸಿ ಹರಿಣಗಳ ಪರ ಮರಿಝಾನ್ನೆ ಕಾಪ್ 3 ಶಬ್ನಿಮ್ ಇಸ್ಮಾಯಿಲ್ 2, ಅಯಬೊಂಗ ಖಾಕ 2, ತುಮಿ ಸೆಖುಖುನೆ, ನೊಂಡುಮಿಸೊ ಶಂಗಾಸೆ ಹಾಗೂ ಸುನ್ ಲೂಸ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಆಫ್ರಿಕನ್ ಮಹಿಳೆಯರು 140 ರನ್ಗಳಿಗೆ ಆಲೌಟ್ ಆಗುವ ಮೂಲಕ 6 ರನ್ಗಳ ಸೋಲುಕಂಡು ಸರಣಿಯಲ್ಲಿ ವೈಟ್ವಾಷ್ ಅಪಮಾನಕ್ಕೆ ತುತ್ತಾದರು.
65 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕಿ ಸುನ್ ಲೂಸ್(24) ಹಾಗೂ ಕಾಪ್(29) 40 ರನ್ ಜೊತೆಯಾಟ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಏಕ್ತಾ ಬಿಸ್ತ್ ಈ ಜೋಡಿಯನ್ನು ಬೇರ್ಪಡಿಸಿ ಮತ್ತೆ ಭಾರತಕ್ಕೆ ಮೇಲುಗೈ ತಂದುಕೊಟ್ಟರು. 29 ರನ್ಗಳಿಸಿದ್ದ ಕಾಪ್ರನ್ನು ದೀಪ್ತಿ ಶರ್ಮಾ ಔಟ್ ಮಾಡುವುದರೊಂದಿಗೆ ಹರಿಣಗಳ ಗೆಲುವಿನ ಆಸೆ ಕಮರಿತು. ಒಟ್ಟಾರೆ 48 ಓವರ್ಗಳಲ್ಲಿ 140 ರನ್ಗಳಿಗೆ ಆಲೌಟ್ ಆಗುವ ಮೂಲಕ 6 ರನ್ಗಳ ಸೋಲುಕಂಡಿತು. ಭಾರತ ಪರ ಏಕ್ತಾ ಬಿಸ್ತ್ 3, ರಾಜೇಶ್ವರಿ ಗಾಯಕವಾಡ್ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರೆ ಇವರಿಗೆ ಸಾತ್ ನೀಡಿದ ಕೌರ್, ಮಾನ್ಸಿ ಜೋಶಿ ಹಅಗೂ ಜೆಮೈಮಾ ರೋಡ್ರಿಗಸ್ ತಲಾ ಒಂದು ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು. 3 ವಿಕೆಟ್ ಪಡೆದ ಏಕ್ತಾ ಬಿಸ್ತ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರೆ ಮರಿಝಾನ್ನೆ ಕಾಪ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.