ತಿರುವನಂತಪುರಂ: ವಿಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯವನ್ನು ದಾಖಲೆಯಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಇಂದು ಪೊಲಾರ್ಡ್ ಪಡೆಯನ್ನು ಎದುರಿಸುತ್ತಿದ್ದು, ಸರಣಿ ಕೈವಶ ಮಾಡಲು ತಯಾರಿ ನಡೆಸಿದೆ.
ಪ್ರಥಮ ಪಂದ್ಯದಲ್ಲಿ ಪ್ರವಾಸಿ ತಂಡ ನೀಡಿದ 208 ರನ್ಗಳ ಗುರಿಯನ್ನು ಹತ್ತು ಎಸೆತ ಇರುವಂತೆಯೇ ಗೆದ್ದಿದ್ದ ವಿರಾಟ್ ಕೊಹ್ಲಿ ಪಡೆ ಸದ್ಯ ಸರಣಿಯ ಮೇಲೆ ಕಣ್ಣಿಟ್ಟಿದೆ. ಇತ್ತ ದೊಡ್ಡ ಮೊತ್ತ ಪೇರಿಸಿಯೂ ಪಂದ್ಯ ಕೈಚೆಲ್ಲಿದ್ದ ವೆಸ್ಟ್ ಇಂಡೀಸ್ ಇಂದಿನ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸುವ ಯೋಚನೆಯಲ್ಲಿದೆ.
ಬ್ಯಾಟಿಂಗ್ನಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿದ್ದು, ಆರಂಭಿಕ ಆಟಗಾರ ಕೆ.ಎಲ್.ರಾಹುಲ್, ನಾಯಕ ಕೊಹ್ಲಿ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದರು. ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಹೈದರಾಬಾದ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲವಾದರೂ ಆಟವನ್ನು ಕಡೆಗಣಿಸುವಂತಿಲ್ಲ.
ಭಾರತ ಮೊದಲ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ನೀರಸ ಪ್ರದರ್ಶನ ನೀಡಿತ್ತು. 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಕೊಂಚ ಹಿನ್ನಡೆ ಅನುಭವಿಸಿತ್ತು. ಹ್ಯಾಟ್ರಿಕ್ ಹೀರೋ ದೀಪಕ್ ಚಹರ್ 56 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್ ಸಹ ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ. ಬೌಲಿಂಗ್ ಜೊತೆಗೆ ಕ್ಷೇತ್ರ ರಕ್ಷಣೆಯಲ್ಲೂ ಭಾರತ ಸುಧಾರಿಸಬೇಕಿದೆ.
ವೆಸ್ಟ್ ಇಂಡೀಸ್ ಸಹ ಎದುರಾಳಿ ತಂಡದಂತೆ ಬೌಲಿಂಗ್ನಲ್ಲಿ ಸುಧಾರಿಸಬೇಕಿದೆ. ಮೊದಲ ಪಂದ್ಯದಲ್ಲಿ ಕೆಸ್ರಿಕ್ ವಿಲಿಯಮ್ಸ್ 60 ರನ್ ನೀಡಿದ್ದರು. ಜೇಸನ್ ಹೋಲ್ಡರ್ ಹಾಗೂ ಖ್ಯಾರಿ ಪೀರೆ ಬೌಲಿಂಗ್ನಲ್ಲೂ ಸಾಕಷ್ಟ ರನ್ ಬಂದಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ವಿಂಡೀಸ್ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ.
ತಿರುವನಂತಪುರಂ ಮೈದಾನದಲ್ಲಿ ಭಾರತ ಆಡಿರುವ ಏಕೈಕ ಟಿ-20 ಪಂದ್ಯವನ್ನು ಗೆದ್ದಿದೆ. ಮಳೆ ಬಾಧಿತ ಪಂದ್ಯವೊಂದರಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ಅನ್ನು ಸೋಲಿಸಿತ್ತು.
ಕಳೆದ 13 ತಿಂಗಳಲ್ಲಿ ವಿಂಡೀಸ್ ವಿರುದ್ಧದ ಏಳೂ ಟಿ-20 ಪಂದ್ಯದಲ್ಲಿ ಭಾರತ ಗೆಲುವು ಕಾಣುತ್ತಲೇ ಬಂದಿದೆ. ಈ ಅಜೇಯ ಓಟಕ್ಕೆ ಹೋಲ್ಡರ್ ಪಡೆ ಬ್ರೇಕ್ ಹಾಕುತ್ತಾ ಎನ್ನುವುದು ಇಂದಿನ ಪಂದ್ಯದ ಫಲಿತಾಂಶದಲ್ಲಿ ತಿಳಿದು ಬರಲಿದೆ.