ಕಟಕ್:ಸರಣಿ ಗೆಲುವಿಗೆ ನಿರ್ಣಾಯಕವೆನಿಸಿರುವ ಕೊನೆಯ ಪಂದ್ಯದಲ್ಲೂ ಭಾರತ 2ನೇ ಪಂದ್ಯದ ಆಟವನ್ನು ಪುನರಾವರ್ತಿಸಲಿದೆ ಎಂದು ಯುವ ಆಟಗಾರ ಶ್ರೇಯಸ್ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 107 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಅಲ್ಲದೆ 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿ ಮೂರನೇ ಪಂದ್ಯದವನ್ನು ರೋಚಕವಾಗಿರಿಸಿದೆ.
ಸರಣಿ ನಿರ್ಣಯಿಸುವ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಯ್ಯರ್, ನಾಳಿನ ಪಂದ್ಯ ನಮಗೆ ಮಾಡು ಇಲ್ಲವೇ ಮಡಿಯಾಗಿದೆ. ನಾವು ಪಂದ್ಯ ಸೋತರೆ ಸರಣಿ ಕಳೆದುಕೊಳ್ಳುತ್ತೇವೆ. ಹಾಗಾಗಿ ಎರಡನೇ ಪಂದ್ಯದಲ್ಲಿನ ಮನಸ್ಥಿಯಿಯಲ್ಲೇ ಮೂರನೇ ಪಂದ್ಯವನ್ನಾಡಲಿದ್ದೇವೆ ಎಂದಿದ್ದಾರೆ.
ಅಯ್ಯರ್ ಮೊದಲೆರಡು ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಮೊದಲ ಪಂದ್ಯದಲ್ಲಿ 70 ಹಾಗೂ ಎರಡನೇ ಪಂದ್ಯದಲ್ಲಿ 53 ರನ್ಗಳಿಸಿದ್ದರು. ಮೊದಲ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸಿದ್ದರೆ, ಎರಡನೇ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಲು ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು.
ದೊಡ್ಡ ಮಟ್ಟದ ಪಂದ್ಯಗಳನ್ನಾಡುವಾಗ ತಂಡದ ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ತಂಡ ಒಮ್ಮೊಮ್ಮೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಲು ಬಯಸುವುದಿಲ್ಲ, ಆ ಸಂದರ್ಭದಲ್ಲಿ ಉತ್ತಮ ಜೊತೆಯಾಟ ಮಾತ್ರ ಅಗತ್ಯವಿರುತ್ತದೆ. ಅದರ ಕಡೆ ಗಮನ ನೀಡಬೇಕು. ಕೆಲವು ಸಂದರ್ಭದಲ್ಲಿ ತಂಡಕ್ಕೆ ರನ್ಗಳಿಸಿಕೊಡುವುದು ನನ್ನ ಕರ್ತವ್ಯವಾಗಿರುತ್ತದೆ. ಆ ಸಂದರ್ಭದಲ್ಲಿ ದೊಡ್ಡ ಹೊಡೆತಗಳಿಗೆ ಪ್ರಯತ್ನ ಮಾಡಲೇಬೇಕು ಎಂದು ತಮ್ಮ ಎರಡು ಅರ್ಧಶತಕಗಳ ವಿಶೇಷವನ್ನು ಹೇಳಿಕೊಂಡಿದ್ದಾರೆ.
ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲಿ 25ಕ್ಕೆ 2 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ ಬಂದು 88 ಎಸೆತಗಳಲ್ಲಿ 70 ರನ್ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 232 ಕ್ಕೆ 2 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ ಬಂದು ಕೇವಲ 32 ಎಸೆತಗಳಲ್ಲಿ 53 ರನ್ಗಳಿಸಿದ್ದರು.