ಇಂದೋರ್ (ಮಧ್ಯಪ್ರದೇಶ):ಉತ್ತಮವಾದ ಬಿಗಿ ಬೌಲಿಂಗ್ ದಾಳಿಯಿಂದಾಗಿ 2ನೇ ಟಿ20 ಪಂದ್ಯವನ್ನು ಶ್ರೀಲಂಕಾ ವಿರುದ್ಧ ಭಾರತ ಗೆದ್ದು ಬೀಗಿದೆ. ಈ ಮೂಲಕ ಸರಣಿಯನ್ನು 1-0 ಅಂತರ ಸಾಧಿಸಿದೆ.
ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 142 ರನ್ ಗಳಿಲಷ್ಟೇ ಶಕ್ತವಾಯ್ತು.
ಶ್ರೀಲಂಕಾ ನೀಡಿದ ಸ್ಪರ್ಧಾತ್ಮಕ ಗುರಿಯನ್ನು 17.3ಓವರ್ಗಳಲ್ಲೇ ಈ ಗುರಿ ಮುಟ್ಟಿದ ಭಾರತ 7 ವಿಕೆಟ್ಗಳಿಂದ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಪರ ಆರಂಭಿಕರಾದ ಅವಿಷ್ಕ ಫರ್ನಾಂಡೋ (22), ಧನುಷ್ಕ ಗುಣತಿಲಕ (20) ಭದ್ರ ಬುನಾದಿ ಹಾಕಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ಬಳಿಕ ಕುಶಾಲ ಪೆರೆರಾ (34) ಸ್ಪಲ್ಪ ಹೊತ್ತು ಹೋರಾಟ ನಡೆಸಿ ಕುಲದೀಪ್ಗೆ ಔಟ್ ಆದರು. ಓಶಾಡೋ ಫರ್ನಾಂಡೋ (10), ರಾಜಪಕ್ಷ (9), ಶನಕ (7), ಧನಂಜಯ ಡಿ.ಸಿಲ್ವ (17) ಹರಸಂಗ (16*) ಅಷ್ಟರ ಮಟ್ಟಿಗೆ ಪ್ರದರ್ಶನ ತೋರಲಿಲ್ಲ. ಭಾರತದ ಪರ ಶಾರ್ದೂಲ್ ಠಾಕೂರ್ 3, ಕುಲದೀಪ್, ನವದೀಪ್ ಸೈನಿಗೆ ತಲಾ 2, ಬುಮ್ರಾ, ಸುಂದರ್ಗೆ ತಲಾ ಒಂದು ವಿಕೆಟ್ಗಳನ್ನು ಪಡೆದುಕೊಂಡರು.
ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್ (45) ಮತ್ತು ಗಾಯದಿಂದಾಗಿ ಹಲವು ದಿನಗಳ ಕಾಲ ತಂಡದಿಂದ ಹೊರಗುಳಿದಿದ್ದ ಶಿಖರ್ ಧವನ್ ಅವರಿಂದ ಮೊದಲ ವಿಕೆಟ್ಗೆ 71 ರನ್ಗಳು ಹರಿದು ಬಂದವು. ಬಳಿಕ ರಾಹುಲ್ ಕೆಟ್ಟ ಹೊಡೆತಕ್ಕೆ ಮುಂದಾಗಿ ಬೌಲ್ಡ್ ಆದರು. ಹಿಂದೆಯೇ ಧವನ್ (32) ಕೂಡ ಫೆವಿಲಿಯನ್ನತ್ತ ಹೊರಟರು.
ಬಳಿಕ ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್ (34), ನಾಯಕ ವಿರಾಟ್ ಕೊಹ್ಲಿ (30*) ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ವಿರಾಟ್ ಕೊಹ್ಲಿ ನಾಯಕನಾಗಿ 1000 ರನ್ ಪೂರೈಸಿದರು. ಲಂಕಾ ಪರ ಹರಸಂಗ 2, ಲಹಿರು ಕುಮಾರ 1 ವಿಕೆಟ್ ಕಿತ್ತಿದ್ದಾರೆ.
ಗುವಾಹಟಿಯಲ್ಲಿ ನಡೆದ ಮೊದಲ ಟಿ20 ಪಂದ್ಯ ಮಳೆಗೆ ಬಲಿಯಾಗಿ ಪಂದ್ಯ ರದ್ದುಗೊಂಡಿತ್ತು. ಇದೀಗ ಭಾರತ 2ನೇ ಟಿ20 ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಭಾರತ 3ನೇ ಪಂದ್ಯದಲ್ಲೂ ಗೆದ್ದು ಸರಣಿ ತಮ್ಮದಾಗಿಸಿಕೊಳ್ಳುವ ತವಕದಲ್ಲಿದೆ. ಇತ್ತ ಶ್ರೀಲಂಕಾ ಕೊನೆಯ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಮೂರನೇ ಪಂದ್ಯ ಜನವರಿ 10ರಂದು ಪುಣೆಯಲ್ಲಿ ನಡೆಯಲಿದೆ.