ರಾಂಚಿ: ಭಾರತ- ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ 180 ರನ್ಗಳಿಗೆ ಸರ್ವಪತನ ಕಂಡಿದೆ.
ಮೂರನೇ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಹರಿಣಗಳ ಮೇಲೆ ಸವಾರಿ ನಡೆಸಿದ್ದು, ಫ್ಲೆಸಿಸ್ ಪಡೆಯನ್ನು ಇನ್ನೂರರ ಒಳಗೆ ಕಟ್ಟಹಾಕುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಕೊಹ್ಲಿ ಪಡೆ 335 ರನ್ಗಳ ಬೃಹತ್ ಮುನ್ನಡೆ ಪಡೆದಿದೆ.
ಎರಡನೇ ದಿನದಾಟದಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ದ.ಆಫ್ರಿಕಾ ಇಂದು ಆರಂಭದಲ್ಲೇ ಫ್ಲೆಸಿಸ್ ನಿರ್ಗಮಿಸಿದರು.
ನಾಯಕನ ನಿರ್ಗಮನದ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಝುಬೈರ್ ಹಂಝಾ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. 79 ಎಸೆತದಲ್ಲಿ 1 ಸಿಕ್ಸರ್ ಹಾಗೂ 10 ಬೌಂಡರಿ ಸಹಿತ 62 ರನ್ ಗಳಿಸಿ ಜಡೇಜಾ ಎಸೆತಕ್ಕೆ ಬಲಿಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ತೆಂಬಾ ಬವುಮಾ 32 ರನ್ನಿಗೆ ನದೀಮ್ಗೆ ವಿಕೆಟ್ ಒಪ್ಪಿಸಿದರು.
ಹೆನ್ರಿಚ್ ಕ್ಲಾಸೆನ್(6), ಡೇನ್ ಪೀಟ್(4), ರಬಾಡ(0), ಜಾರ್ಜ್ ಲಿಂಡೆ(37) ಹಾಗೂ ಅನ್ರಿಚ್ ನೋರ್ಟ್ಜೆ(4) ರನ್ಗಳಿಗೆ ನಿರ್ಗಮಿಸಿದರು.
ಟೀಂ ಇಂಡಿಯಾ ಪರ ಉಮೇಶ್ ಯಾದವ್ 3, ಶಮಿ, ನದೀಮ್ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದರು.