ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆರಂಭದಲ್ಲಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಇದೀಗ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಅರ್ಧಶತಕ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದ ಕೊಹ್ಲಿ, ಎರಡನೇ ದಿನದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಶತಕಕ್ಕೆ ಸುಮ್ಮನಾಗದ ರನ್ಮಷಿನ್ ಸರಾಗವಾಗಿ ಬೌಂಡರಿ ಬಾರಿಸುತ್ತಾ 150ರ ಗಡಿಯನ್ನೂ ದಾಟಿದರು. ಇದೇ ವೇಳೆ ಬ್ರಾಡ್ಮನ್ ಹೆಸರಲ್ಲಿದ್ದ ಆ ದಾಖಲೆಯೂ ಪತನವಾಗಿದೆ.
ಶತಕದ ಬರ ನೀಗಿಸಿದ ಕೊಹ್ಲಿ... ವರ್ಷದ ಮೊದಲ ಟೆಸ್ಟ್ ಶತಕ ದಾಖಲು
ನಾಯಕನಾಗಿ ಅತಿಹೆಚ್ಚು 150+ ಗಳಿಕೆ:
ಟೆಸ್ಟ್ ನಾಯಕನಾಗಿ ಅತಿಹೆಚ್ಚು 150ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎನ್ನುವ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ನಾಯಕನಅಗಿ ಕೊಹ್ಲಿ 9 ಬಾರಿ 150ಕ್ಕೂ ಅಧಿಕ ರನ್ ಗಳಿಸಿದ್ದರೆ, ಬ್ರಾಡ್ಮನ್ 8 ಬಾರಿ ಈ ಸಾಧನೆ ಮಾಡಿದ್ದಾರೆ.
ಉಳಿದಂತೆ ಮೈಕಲ್ ಕ್ಲಾರ್ಕ್, ಮಹೇಲ ಜಯವರ್ಧನೆ, ಬ್ರಿಯಾನ್ ಲಾರಾ ಹಾಗೂ ಗ್ರೇಮ್ ಸ್ಮಿತ್ ನಾಯಕರಾಗಿದ್ದಾಗ 7 ಬಾರಿ 150ರ ಗಡಿ ದಾಟಿದ್ದರು.
ನಾಯಕನಾಗಿ ಅತಿಹೆಚ್ಚು ಟೆಸ್ಟ್ ಶತಕ:
ಇಂದಿನ ಆಟದಲ್ಲಿ ಕೊಹ್ಲಿ ಶತಕದ ಸಂಖ್ಯೆಯನ್ನು 26ಕ್ಕೆ ಹೆಚ್ಚಿಸಿಕೊಂಡರೆ ನಾಯಕನಾಗಿ ಈ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಮೊದಲ ಸ್ಥಾನದಲ್ಲಿ ದ.ಆಫ್ರಿಕಾದ ಗ್ರೇಮ್ ಸ್ಮಿತ್(25) ಇದ್ದಾರೆ. ಕೊಹ್ಲಿ ಆಸೀಸ್ನ ರಿಕಿ ಪಾಂಟಿಂಗ್ ಜೊತೆ ಜಂಟಿಯಾಗಿ ಎರಡನೇ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ಅಲನ್ ಬಾರ್ಡರ್ ಹಾಗೂ ಸ್ಟೀವ್ ಸ್ಮಿತ್(15 ಶತಕ) ಇದ್ದಾರೆ.
ಟೆಸ್ಟ್ ಸರಾಸರಿಯಲ್ಲಿ ಸಚಿನ್ ಹಿಂದಿಕ್ಕಿದ ಕೊಹ್ಲಿ:ಈಗಾಗಲೇ ಮೂರು ಮಾದರಿಯ ಕ್ರಿಕೆಟ್ನಲ್ಲೂ ಸರಾಸರಿ 50ಕ್ಕೂ ಅಧಿಕ ಹೊಂದಿರುವ ವಿರಾಟ್ ಕೊಹ್ಲಿ ಇಂದಿನ ಶತಕ ಸಾಧನೆಯ ಮೂಲಕ ಸಚಿನ್ ತೆಂಡುಲ್ಕರ್ ಹೊಂದಿದ್ದ ಟೆಸ್ಟ್ ಸರಾಸರಿಯನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ನಲ್ಲಿ ಸಚಿನ್ ಸರಾಸರಿ 53.78 ಇತ್ತು. ಸದ್ಯ ಕೊಹ್ಲಿ ಟೆಸ್ಟ್ ಸರಾಸರಿ 54.34 ಅಗಿದೆ.