ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು, ಪಂದ್ಯದ ವೇಳೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿರುವುದರಿಂದ ಲೋಕಲ್ ಬಾಯ್ ಧೋನಿ ಪಂದ್ಯ ವೀಕ್ಷಣೆ ಮಾಡಲು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಮೂಲಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ತನ್ನ ಬಾಲ್ಯದ ಸ್ನೇಹಿತರು ಮತ್ತು ಜಾರ್ಖಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಹಿರ್ ದಿವಾಕರ್ ಜೊತೆಯಲ್ಲಿ ಮುಂಬೈನಿಂದ ರಾಂಚಿಗೆ ಆಗಮಿಸಲಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವನ್ನ ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಂತರ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ಕೊಂಚ ದೂರ ಉಳಿದಿದ್ದಾರೆ. ಅವರ ನಿವೃತ್ತಿ ಬಗ್ಗೆಯೂ ಹಲವು ಮಾತುಗಳು ಕೇಳಿಬಂದಿದ್ದವು. ಇದೀಗ ಧೋನಿ ಮತ್ತೆ ಕ್ರೀಡಾಂಗಣದತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಧೋನಿ ಅಭಿಮಾನಿಗಳ ಸಂತಸ ಹೆಚ್ಚಿಸಿದೆ.