ರಾಂಚಿ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಟೆಸ್ಟ್ ಪಂದ್ಯಗಳಲ್ಲಿ ಜಯಗಳಿಸಿರುವ ಟೀಂ ಇಂಡಿಯಾ ಇಂದಿನಿಂದ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿದೆ.
ಟೀಂ ಇಂಡಿಯಾಗೆ ಬ್ಯಾಟ್ಸ್ಮನ್ ಮತ್ತು ಬೌಲರ್ಗಳು ಉತ್ತಮ ಫಾರ್ಮ್ನಲ್ಲಿದ್ದು, ಈ ಪಂದ್ಯದಲ್ಲೂ ಇದೇ ಪ್ರದರ್ಶನ ಮುಂದುವರೆಸಿದರೆ ಗೆಲುವು ಕಷ್ಟವೇನಲ್ಲ. ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಉತ್ತಮ ಫಾರ್ಮ್ನಲ್ಲಿದ್ದಾರೆ. ಅರಂಭಿಕ ಹಂತದಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆ. 2ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ನಾಯಕ ವಿರಾಟ್ ಕೊಹ್ಲಿ ಕೂಡ ಫಾರ್ಮ್ಗೆ ಮರಳಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಹಾನೆ, ಜಡೇಜಾ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಟೀಂ ಇಂಡಿಯಾ ಬಲ ಹೆಚ್ಚಿಸಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಆರ್. ಅಶ್ವಿನ್, ಜಡೇಜಾ, ಉಮೇಶ್ ಯಾದವ್, ಮಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದು, ಹರಿಣ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ತಂಡ ಅಂತಿಮ ಪಂದ್ಯದಲ್ಲಾದರೂ ಗೆಲುವು ಸಾಧಿಸುವ ಮೂಲಕ ಟೂರ್ನಿಗೆ ವಿದಾಯ ಹೇಳುವ ಗುರಿ ಹೊಂದಿದೆ. ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡದಿರುವುದು ತಂಡಕ್ಕೆ ಹಿನ್ನಡೆಯಾಗಿದ್ದರೆ, ಬೌಲರ್ಗಳು ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡದಿರುವುದು ತಲೆನೋವು ತರಿಸಿದೆ.
ಶಹಬಾಜ್ ನದೀಮ್ ಪದಾರ್ಪಣೆ
ಇಂದಿನ ಪಂದ್ಯದ ಮೂಲಕ ಸ್ಪಿನ್ನರ್ ಶಹಬಾಜ್ ನದೀಮ್, ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೈಯಿಂದ ಕ್ಯಾಪ್ ಪಡೆಯುವ ಮೂಲಕ ನದೀಮ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಧೋನಿ ತವರಲ್ಲಿ ನಡೆಯುತ್ತಿದೆ ಪಂದ್ಯ
ಭಾರತಕ್ಕೆ ಈ ಪಂದ್ಯ ಹಲವು ರೀತಿಯಿಂದ ಮಹತ್ವದ್ದಾಗಿದೆ. ಈ ಪಂದ್ಯ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರಲ್ಲಿ ನಡೆಯುತ್ತಿದ್ದು, ಭಾರತ ತಂಡಕ್ಕೆ ಪ್ರತಿಷ್ಟೆಯ ಪಂದ್ಯವಾಗಲಿದೆ. ಇನ್ನೊಂದು ಕಡೆ, ನೆಚ್ಚಿನ ನಾಯಕ ಧೋನಿ ಅನುಪಸ್ಥಿತಿ ತವರಿನ ಅಭಿಮಾನಿಗಳಿಗೆ ಕಾಡಲಿದೆ.
ಈಗಾಗಲೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಮತ್ತೊಂದು ಪಂದ್ಯ ಗೆಲ್ಲುವ ಮೂಲಕ ಅಂಕವನ್ನ ಹೆಚ್ಚಿಸಿಕೊಳ್ಳುವತ್ತ ದೃಷ್ಟಿ ಹರಿಸಿದೆ. ಆದರೆ, ದಕ್ಷಿಣ ಆಫ್ರಿಕಾ ಮಾತ್ರ ಇನ್ನು ಖಾತೆ ತೆರೆಯುವಲ್ಲಿ ವಿಫಲವಾಗಿದ್ದು, ಮುಂದಿನ ಪಂದ್ಯಗಲ್ಲಿ ಗೆಲುವು ಸಾಧಿಸಿ ಅಂಕ ಗಳಿಸುತ್ತಾ ಕಾದು ನೋಡಬೇಕಿದೆ.
ಆಡುವ 11ರ ಬಳಗ
ಭಾರತ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಹಬಾಜ್ ನದೀಮ್, ಉಮೇಶ್ ಯಾದವ್, ಮೊಹಮ್ಮದ್ ಶಮಿ
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್, ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜಾ, ಫಾಫ್ ಡು ಪ್ಲೆಸಿಸ್ (ನಾಯಕ), ಟೆಂಬಾ ಬಾವುಮಾ, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಜಾರ್ಜ್ ಲಿಂಡೆ, ಡೇನ್ ಪೀಡ್ಟ್, ಕಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ, ಲುಂಗಿ ಎನ್‌ಜಿಡಿ