ಹೈದರಾಬಾದ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ - ಪಾಕಿಸ್ತಾನ ನಡುವೆ ಇದೇ ವರ್ಷ ಕ್ರಿಕೆಟ್ ಪಂದ್ಯಗಳು ನಡೆಯಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿವೆ ಎನ್ನಲಾಗಿದೆ.
ಕಳೆದ 13 ವರ್ಷಗಳಿಂದ ಉಭಯ ದೇಶಗಳ ನಡುವೆ ಯಾವುದೇ ರೀತಿಯ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆದಿಲ್ಲ. ಇದರ ಮಧ್ಯೆ ಅಲ್ಲಿನ ಮಾಧ್ಯಮವೊಂದು ಈ ರೀತಿಯ ಸುದ್ದಿ ಪ್ರಕಟಿಸಿದ್ದು, ಅನೇಕ ಕುತೂಹಲಗಳಿಗೆ ಕಾರಣವಾಗಿದೆ. ಐಸಿಸಿ ಆಯೋಜನೆ ಮಾಡುವ ಟೂರ್ನಿಗಳಲ್ಲಿ ಮಾತ್ರ ಉಭಯ ದೇಶಗಳು ಸದ್ಯ ಭಾಗಿಯಾಗುತ್ತಿದ್ದು, ಆದರೆ, ಯಾವುದೇ ರೀತಿಯ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯ ನಡೆದಿಲ್ಲ.
ಪಾಕಿಸ್ತಾನದ 'ಜಂಗ್' ಎಂಬ ಪತ್ರಿಕೆ ಇದರ ಬಗ್ಗೆ ವರದಿ ಮಾಡಿದ್ದು, ಇದೇ ವರ್ಷ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿ ನಡೆಯಲಿದೆ ಎಂದು ತಿಳಿಸಿದೆ. ಒಟ್ಟು ಆರು ದಿನಗಳಲ್ಲಿ ಮೂರು ಪಂದ್ಯಗಳು ಆಯೋಜನೆಗೊಂಡಿವೆ ಎಂದು ಪಿಸಿಬಿ ಮೂಲಗಳಿಂದಲೇ ಈ ಮಾಹಿತಿ ಲಭ್ಯವಾಗಿರುವುದಾಗಿ ವರದಿ ಮಾಡಿದೆ. ಇದೇ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ಬಿಸಿಸಿಐ ಜತೆ ಚರ್ಚೆ ನಡೆಸಿದೆ ಎನ್ನಲಾಗಿದೆ. ವಿಶೇಷವೆಂದರೆ ಇದೇ ವರ್ಷ ಶ್ರೀಲಂಕಾದಲ್ಲಿ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆಗೊಳ್ಳುವ ಸಾಧ್ಯತೆ ಇದ್ದು, ಭಾರತದಲ್ಲೇ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಇದರಲ್ಲಿ ಭಾರತ-ಪಾಕ್ ಮುಖಾಮುಖಿಯಾಗಲಿವೆ.
ಮುಂಬೈನಲ್ಲಿ ಭಯೋತ್ಪಾದನೆ ದಾಳಿ ನಡೆದ ಬಳಿಕ ಭಾರತ-ಪಾಕ್ ಮಧ್ಯೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆದಿಲ್ಲ. ಆದರೆ, ಇದೀಗ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವುದು ಅನೇಕ ಕುತೂಹಲಕ್ಕೆ ಕಾರಣವಾಗಿದೆ.