ವೆಲ್ಲಿಂಗ್ಟನ್: ಭಾರತ ತಂಡ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವುದೇ ಪ್ರತಿರೋಧವಿಲ್ಲದೆ 10 ವಿಕೆಟ್ಗಳ ಸೋಲು ಕಂಡಿದೆ. ಇದಕ್ಕೆ ಬ್ಯಾಟಿಂಗ್ ವೈಫಲ್ಯವೇ ಕಾರಣೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 165 ರನ್ಗಳಿಗೆ ಆಲೌಟ್ ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ 191 ರನ್ಗಳಿಗೆ ಆಲೌಟ್ ಆಗಿತ್ತು. ನ್ಯೂಜಿಲ್ಯಾಂಡ್ 348 ರನ್ ಳಿಸಿದರೆ, ಎರಡನೇ ಇನಿಂಗ್ಸ್ನಲ್ಲಿ ಔಟಾಗದೆ 9 ರನ್ ಗಳಿಸಿ 10 ವಿಕೆಟ್ಗಳ ಭರ್ಜರಿ ಜಯ ಗಳಿಸಿತ್ತು. ಈ ಪಂದ್ಯದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಬಹುದೊಡ್ಡ ಕಾರಣ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
"ಈ ಪಂದ್ಯದಲ್ಲಿ ನಾವು ಉತ್ತಮ ಸ್ಪರ್ಧೆ ನೀಡಲಿಲ್ಲ. ಈ ಹಿಂದೆ ನಾವು ಸೋಲು ಕಂಡಿದ್ದ ಪಂದ್ಯಗಳಲ್ಲಿ ನಾವು ಉತ್ತಮವಾಗಿ ಆಡಿ, ಎದುರಾಳಿಗೆ ತಕ್ಕ ಪೈಪೋಟಿ ನೀಡಿದ್ದೆವು. ನನ್ನ ಆಲೋಚನೆ ಪ್ರಕಾರ ಮೊದಲ ಇನ್ನಿಂಗ್ಸ್ನಲ್ಲಿ ನಿರಾಶದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದೆವು" ಎಂದು ಕೊಹ್ಲಿ ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ಈ ಪಂದ್ಯದ ಸೋಲಿಗೆ ಯಾವುದೇ ಅವಮಾನವಿಲ್ಲ. ಸೋಲನ್ನು ನಾವು ಸ್ವೀಕರಿಸಿದ್ದೇವೆ. ಈ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ತೋರಿಲ್ಲ ಎಂಬುದು ನಮಗೆ ತಿಳಿದಿದೆ. ಇದನ್ನು ಒಪ್ಪಿಕೊಳ್ಳುವುದಕ್ಕೆ ಯಾವುದೇ ರೀತಿಯ ಹಿಂಜರಿಕೆಯಿಲ್ಲ. ಮುಂದಿನ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡುವ ಮನೋಭಾವನೆಯಿಂದ ಹಾಗೂ ಸ್ಪರ್ಧಾತ್ಮಕತೆಯಿಂದ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇದೇ ಮೊದಲ ಬಾರಿ ಸೋಲು ಕಂಡಿದೆ. ಆದರೂ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ನ್ಯೂಜಿಲ್ಯಾಂಡ್ ತಂಡ 5ನೇ ಸ್ಥಾನಕ್ಕೇರಿದೆ. ಭಾರತ-ಕಿವೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 29ರಿಂದ ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.