ಮುಂಬೈ:ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಕೆಲವೊಂದು ಮಹತ್ವದ ಬದಲಾವಣೆಗಳೊಂದಿಗೆ ತಂಡ ಆಯ್ಕೆ ಮಾಡಲಾಗಿದೆ.
ಜ.24ರಿಂದ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಐದು ಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದೆ.
ಆಸ್ಟ್ರೇಲಿಯಾ ವಿರುದ್ಧದ ಕೊನೆ ಏಕದಿನ ಪಂದ್ಯದ ವೇಳೆ ಭುಜದ ಗಾಯಕ್ಕೊಳಗಾಗಿರುವ ಸ್ಟಾರ್ ಓಪನರ್ ಶಿಖರ್ ಧವನ್ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಹೀಗಾಗಿ ಏಕದಿನ ತಂಡಕ್ಕೆ ಮತ್ತೋರ್ವ ಸ್ಫೋಟಕ ಆಟಗಾರ ಪೃಥ್ವಿ ಶಾ ಆಯ್ಕೆಗೊಂಡಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವಕಾಶ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಿವೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್ ಚಚ್ಚಿದ ಪೃಥ್ವಿ ಶಾ ಏಕದಿನ ಕ್ರಿಕೆಟ್ ತಂಡಕ್ಕೆ ಬುಲಾವ್ ಪಡೆದಿದ್ದಾರೆ.
ಗಾಯದಿಂದ ಚೇತರಿಕೆ ಕಾಣದ ಕಾರಣಕ್ಕಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ತಂಡಕ್ಕೆ ಆಯ್ಕೆಗೊಂಡಿಲ್ಲ ಎಂದು ತಿಳಿದು ಬಂದಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಏಕದಿನ ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಪೃಥ್ವಿ ಶಾ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಕೇದಾರ್ ಜಾಧವ್.
ಟಿ20 ಸರಣಿಗೆ ಟೀಂ ಇಂಡಿಯಾ ಆಟಗಾರರು:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಸಂಜು ಸ್ಯಾಮ್ಸನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.