ಅಹ್ಮದಾಬಾದ್:ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದ ಟೀಂ ಇಂಡಿಯಾ, ಇದೀಗ ಟಿ-20 ಕ್ರಿಕೆಟ್ ಸರಣಿಯಲ್ಲೂ ಜಯ ಸಾಧಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 36 ರನ್ಗಳ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.
ಟಿ-20 ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ, ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್ ಅಜೇಯ 80 ರನ್ ಹಾಗೂ ಉಪನಾಯಕ ರೋಹಿತ್ ಶರ್ಮಾ 64 ರನ್ಗಳ ಜೊತೆಯಾಟದಿಂದ ಟೀಂ ಇಂಡಿಯಾ 200ರಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇವರಿಗೆ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್(32) ಮತ್ತು ಹಾರ್ದಿಕ್ ಪಾಂಡ್ಯ(39) ರನ್ಗಳ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ರಶೀದ್ ಹಾಗೂ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದುಕೊಂಡರು.
ಜೇಸನ್ ರಾಯ್ ವಿಕೆಟ್ ಪಡೆದ ಭುವನೇಶ್ವರ್ 225 ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಮೊದಲ ಓವರ್ನಲ್ಲೇ ಜೇಸನ್ ರಾಯ್(0) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ವಿಕೆಟ್ ಕೀಪರ್ ಬಟ್ಲರ್(52), ಮಲನ್(68) ಟೀಂ ಇಂಡಿಯಾ ಬೌಲರ್ಗಳನ್ನ ಕಾಡಿದರು. ಜೊತೆಗೆ 100 ರನ್ಗಳ ಜೊತೆಯಾಟವಾಡಿ ಕೊಹ್ಲಿ ಪಡೆಗೆ ಸೋಲಿನ ಭೀತಿ ಹುಟ್ಟಿಸಿದರು.
ಅಬ್ಬರಿಸಿದ ವಿರಾಟ್ ಕೊಹ್ಲಿ ಇದನ್ನೂ ಓದಿ: ಫೈನಲ್ ಪಂದ್ಯದಲ್ಲಿ ಕೊಹ್ಲಿ ಪಡೆ ಸ್ಫೋಟಕ ಬ್ಯಾಟಿಂಗ್... ಇಂಗ್ಲೆಂಡ್ ಗೆಲುವಿಗೆ 225 ರನ್ಗಳ ಬೃಹತ್ ಟಾರ್ಗೆಟ್
52 ರನ್ ಗಳಿಸಿದ್ದ ಬಟ್ಲರ್ ವಿಕೆಟ್ ಪಡೆದುಕೊಳ್ಳುವಲ್ಲಿ ಭುವನೇಶ್ವರ್ ಯಶಸ್ವಿಯಾದರೆ, ಇದರ ಬೆನ್ನಲ್ಲೇ ಠಾಕೂರ್ ಕೂಡ 68 ರನ್ ಗಳಿಸಿದ್ದ ಮಲನ್ ವಿಕೆಟ್ ಪಡೆದರು. ಈ ಮೂಲಕ ಟೀಂ ಇಂಡಿಯಾ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು. ಇದಾದ ಬಳಿಕ ಬಂದ ಕ್ಯಾಪ್ಟನ್ ಮಾರ್ಗನ್ 1 ರನ್, ಬೈರ್ಸ್ಟೋ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಸ್ಫೋಟಕ ಬ್ಯಾಟ್ಸಮನ್ ಸ್ಟೋಕ್ಸ್ ಕೂಡ 12 ರನ್ ಗಳಿಸಿ ನಟರಾಜನ್ ಓವರ್ನಲ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಟೀಂ ಇಂಡಿಯಾ ಗೆಲುವು ಖಚಿತವಾಯಿತು. ಕೊನೆಯದಾಗಿ ಆರ್ಚರ್ 1 ರನ್, ಜೋರ್ಡನ್ 11 ರನ್ ಗಳಿಸಿ ವಿಕೆಟ್ ನೀಡಿದ್ರು. ಕೊನೆಯದಾಗಿ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದ್ದು, 36 ರನ್ಗಳ ಸೋಲು ಕಂಡಿದೆ.
ರೋಹಿತ್-ವಿರಾಟ್ ಬ್ಯಾಟಿಂಗ್ ಆರ್ಭಟ ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ 2 ವಿಕೆಟ್, ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಹಾಗೂ ನಟರಾಜನ್ ತಲಾ 1 ವಿಕೆಟ್ ಪಡೆದುಕೊಂಡರು.
ರೋಹಿತ್-ವಿರಾಟ್ ಬ್ಯಾಟಿಂಗ್ ಆರ್ಭಟ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯ ಗೆಲ್ಲುವ ಮೂಲಕ ಸರಣಿ ಸಮಬಲ ಮಾಡಿಕೊಂಡಿತ್ತು. ಇದಾದ ಬಳಿಕ ತಿರುಗೇಟು ನೀಡಿದ್ದ ಇಂಗ್ಲೆಂಡ್ ಮೂರನೇ ಪಂದ್ಯ ಗೆದ್ದರೆ, ಸರಣಿ ಜೀವಂತವಾಗಿಟ್ಟುಕೊಳ್ಳಲು ಗೆಲುವು ಸಾಧಿಸಬೇಕಾಗಿದ್ದ 4ನೇ ಪಂದ್ಯದಲ್ಲಿ ಕೊಹ್ಲಿ ಪಡೆ ಜಯ ಸಾಧಿಸಿತ್ತು. ಹೀಗಾಗಿ ಫೈನಲ್ ಪಂದ್ಯ ರೋಚಕತೆ ಪಡೆದುಕೊಂಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಪಡೆ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ಪುಣೆಯಲ್ಲಿ ಏಕದಿನ ಸರಣಿ ಆರಂಭಗೊಳ್ಳಲಿದೆ.