ಕೋಲ್ಕತ್ತಾ: ಭಾರತ- ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಈಗಾಗಲೇ ಬಿಸಿಸಿಐ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ನ. 22ರಿಂದ 26ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಈ ಅಹರ್ನಿಶಿ ಟೆಸ್ಟ್ ಪಂದ್ಯದ ಟಿಕೆಟ್ಗೆ ಉತ್ತಮ ಬೇಡಿಕೆ ಕಂಡುಬಂದಿದೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್(CAB) ಆನ್ಲೈನ್ನಲ್ಲಿ ಟಿಕೆಟ್ ಮಾರಾಟಕ್ಕಿಟ್ಟಿದ್ದು, ಮೊದಲ ಮೂರು ದಿನದ ಟಿಕೆಟ್ ಸೋಲ್ಡ್ಔಟ್ ಆಗಿದೆ.
ಮೊದಲ ಮೂರು ದಿನದ ಶೇ. 30ರಷ್ಟು(5,905) ಟಿಕೆಟ್ ಆನ್ಲೈನ್ನಲ್ಲಿ ಮಾರಾಟ ಮಾಡಲಾಗಿದೆ. ಇದೇ ವೇಳೆ ನಾಲ್ಕನೇ ದಿನ 3,500 ಟಿಕೆಟ್ ಮಾರಾಟಗೊಂಡಿದೆ ಎಂದು ಸಿಎಬಿ ಕಾರ್ಯದರ್ಶಿ ಅಭಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. ಈ ಪಂದ್ಯದ ಟಿಕೆಟ್ ಪಿಂಕ್ ಬಣ್ಣದಲ್ಲಿರುವುದು ವಿಶೇಷ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಗ್ಲೋಬಲ್ ಕ್ಯಾನ್ಸರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಟೆಸ್ಟ್ ಪಂದ್ಯದ ಮೊದಲ ದಿನ 20 ಸ್ತನ ಕ್ಯಾನ್ಸರ್ ರೋಗಿಗಳು ಹಾಜರಿರಲಿದ್ದು, ಇವರನ್ನು ಸಿಎಬಿ ಸನ್ಮಾನಿಸಲಿದೆ ಎಂದು ತಿಳಿದು ಬಂದಿದೆ.
ಭಾರತ- ಬಾಂಗ್ಲಾ ಪ್ರಧಾನಿ ಉಪಸ್ಥಿತಿ ಸಾಧ್ಯತೆ:
ಭಾರತದಲ್ಲಿ ನಡೆಯುತ್ತಿರುವ ಮೊದಲ ಅಹರ್ನಿಶಿ ಟೆಸ್ಟ್ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಮರಣೀಯವಾಗಿಸಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ತೀರ್ಮಾನಿಸಿದೆ.
ಈಗಾಗಲೇ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾಗೆ ಆಹ್ವಾನ ಕಳುಹಿಸಲಾಗಿದ್ದು, ಪಂದ್ಯದ ಮೊದಲ ದಿನ ತಮ್ಮ ಉಪಸ್ಥಿತಿಯನ್ನು ಖಾತ್ರಿಪಡಿಸಿದ್ದಾರೆ. ಪ್ರಧಾನಿ ಮೋದಿಗೂ ಸಹ ಆಹ್ವಾನ ಕಳುಹಿಸಲಾಗಿದ್ದು, ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಯಾರ್ಯಾರೆಲ್ಲಾ ಭಾಗಿ...?
ಉಭಯ ದೇಶಗಳ ಪ್ರಧಾನಿಗಳ ಹೊರತಾಗಿ ವಿವಿಧ ಕ್ರೀಡಾಪಟುಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಚೆಸ್ ತಾರೆ ವಿಶ್ವನಾಥನ್ ಆನಂದ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ.ಸಿಂಧು, ಮಹಿಳಾ ಬಾಕ್ಸರ್ ಮೇರಿ ಕೋಮ್, ಒಲಂಪಿಕ್ ಗೋಲ್ಡ್ ಮೆಡಲಿಸ್ಟ್ ಅಭಿನವ್ ಬಿಂದ್ರಾ ಭಾಗಿಯಾಗಲಿದ್ದು, ಇವರಿಗೆ ಸನ್ಮಾನವೂ ನಡೆಯಲಿದೆ. ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಹಾಗೂ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ಗೂ ಆಹ್ವಾನ ಕಳುಹಿಸಲಾಗಿದೆ.
ಟೀಂ ಇಂಡಿಯಾದ ಮಾಜಿ ನಾಯಕರುಗಳನ್ನು ಮೊದಲ ದಿನದಂದು ಭಾಗಿಯಾಗುವಂತೆ ಆಹ್ವಾನ ಕಳುಹಿಸಲಾಗಿದೆ. ಈ ವೇಳೆ ಕಾಮೆಂಟರಿ ಬಾಕ್ಸ್ನಲ್ಲಿ ಈ ಎಲ್ಲ ನಾಯಕರು ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳಲಿದ್ದಾರೆ.