ನವದೆಹಲಿ:ಇಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಮೇಲ್ನೋಟಕ್ಕೆ ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅನುಪಸ್ಥಿತಿ ಬಾಂಗ್ಲಾದೇಶಕ್ಕೆ ಬಹುವಾಗಿ ಕಾಡಲಿದ್ದು, ಇತ್ತ ಕೊಹ್ಲಿ ಇಲ್ಲದ ತಂಡವನ್ನು ಹಿಟ್ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಅಬ್ಬರಿಸಿದ ಮುಂಬೈ ಮೂಲದ ಆಲ್ರೌಂಡರ್ ಶಿವಂ ದುಬೆ ರಾಷ್ಟ್ರೀಯ ತಂಡದ ಕದ ತಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ದುಬೆ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಮೂರು ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತದಲ್ಲಿ ಆಡಲು ಆಗಮಿಸಿರುವ ಬಾಂಗ್ಲಾದೇಶ ಇಂದಿನಿಂದ ತನ್ನ ಅಭಿಯಾನ ಆರಂಭಿಸಲಿದೆ. ಶಕೀಬ್ ಅನುಪಸ್ಥಿತಿ ಒಂದೆಡೆಯಾದರೆ, ವೈಯಕ್ತಿಕ ಕಾರಣಗಳಿಂದ ಅನುಭವಿ ಆಟಗಾರ ತಮಿಮ್ ಇಕ್ಬಾಲ್ ಭಾರತ ಪ್ರವಾಸ ಕೈಗೊಂಡಿಲ್ಲ. ಇವೆಲ್ಲದರ ನಡುವೆಯೂ ಮಹ್ಮದುಲ್ಲಾ ಪಡೆ ಗೆಲ್ಲುವ ಉತ್ಸಾಹದಲ್ಲಿದೆ.