ಮೆಲ್ಬೋರ್ನ್ (ಆಸ್ಟ್ರೇಲಿಯಾ):ಆಸ್ಟ್ರೇಲಿಯಾ ಮತ್ತು ಭಾರತೀಯ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂದಿನ ಋತುವಿನವರೆಗೆ ಮುಂದೂಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಸಿದ್ಧತೆಗಾಗಿ, ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ಏಕದಿನ ಸರಣಿಯನ್ನು 2021ರ ಜನವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.
ಮುಂದಿನ ಸೀಸನ್ನಲ್ಲಿ ಹೆಚ್ಚುವರಿ ಮೂರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಸೇರಿಸಿ ಪ್ರವಾಸವನ್ನು ವಿಸ್ತರಿಸಲು ಯೋಜಿಸಲಾಗಿದೆ. ಆಸ್ಟ್ರೇಲಿಯಾದ ಮಹಿಳಾ ತಂಡವು ಮುಂದಿನ ಋತುವಿನಲ್ಲಿ ಭಾರತಕ್ಕೆ ಆತಿಥ್ಯ ವಹಿಸಲು ಎದುರು ನೋಡುತ್ತಿದೆ ಎಂದು ಸಿಎ ಮಧ್ಯಂತರ ಸಿಇಒ ನಿಕ್ ಹಾಕ್ಲೆ ಹೇಳಿದ್ದಾರೆ.
2022ರ ಮಾರ್ಚ್ 4 ರಿಂದ ಏಪ್ರಿಲ್ 3 ರವರೆಗೆ ನ್ಯೂಜಿಲ್ಯಾಂಡ್ನಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಈಗಾಗಲೇ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಉಳಿದ ಮೂರು ತಂಡಗಳು ಐಸಿಸಿ ಅರ್ಹತಾ ಪಂದ್ಯಾವಳಿಯಿಂದ ಆಯ್ಕೆಯಾಗಲಿದ್ದು, ಈ ಅರ್ಹತಾ ಪಂದ್ಯಗಳು 2021ರ ಜೂನ್ 26 ರಿಂದ ಜುಲೈ 10 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿವೆ.