ಸಿಡ್ನಿ: ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಪಂದ್ಯದಲ್ಲಿ ಸಾಕಷ್ಟು ಗಾಯ ಮತ್ತು ನೋವುಗಳ ನಡುವೆಯೂ ಆಟಗಾರರು ತೋರಿದ ಕೆಚ್ಚೆದೆಯ ಪ್ರದರ್ಶನಕ್ಕೆ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮವಾರ 3ನೇ ಟೆಸ್ಟ್ನ ಕೊನೆಯ ದಿನ ಭಾರತ 309 ರನ್ಗಳಿಸಬೇಕಿತ್ತು. ಆದರೆ ನಾಯಕ ರಹಾನೆ ನಿನ್ನೆಯಷ್ಟೇ ವಿಕೆಟ್ ಒಪ್ಪಿಸಿ ನಿರಾಶೆಯನುಭವಿಸಿದ್ದರು. ಆದರೆ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಪಂತ್ ಪಂದ್ಯದ ಗತಿಯನ್ನೇ ಬದಲಿಸಿದರು. ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು.
ಆದರೆ ಪಂತ್ 118 ಎಸೆತಗಳಲ್ಲಿ 97 ರನ್ಗಳಿಸಿದ್ದ ವೇಳೆ ಔಟಾದರೆ, ನಂತರ ಕೇವಲ 20 ರನ್ಗಳ ಅಂತರದಲ್ಲಿ ಪೂಜಾರ (77) ಕೂಡ ಔಟಾದರು. ಸೆಟ್ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡ ಭಾರತ ಸೋಲಿನತ್ತ ಮುಖ ಮಾಡಿತ್ತು. ಆದರೆ ಅಶ್ವಿನ್ (39) ಮತ್ತು ಹನುಮ ವಿಹಾರಿ (23) 6ನೇ ವಿಕೆಟ್ ಜೊತೆಯಾಟದಲ್ಲಿ 42.4 ಓವರ್ಗಳನ್ನು ಯಶಸ್ವಿಯಾಗಿ ಆಡುವ ಮೂಲಕ ಪಂದ್ಯವನ್ನು ಡ್ರಾ ಸಾಧಿಸಲು ನೆರವಾದರು.
ಈ ಕುರಿತು ಪಂದ್ಯದ ನಂತರ ಮಾತನಾಡಿರುವ ರಹಾನೆ, ನಾವು ಪಂದ್ಯ ಆರಂಭವಾಗುವುದಕ್ಕೆ ಮುನ್ನ ಫಲಿತಾಂಶದ ಬಗ್ಗೆ ಆಲೋಚನೆ ಮಾಡದೆ, ಕೊನೆಯವರೆಗೂ ಹೋರಾಟ ಮಾಡಬೇಕೆಂದು ಮಾತನಾಡಿಕೊಂಡಿದ್ದೆವು. ಅದೇ ಮಾದರಿಯಲ್ಲಿ ಆಟಗಾರರು ಗಾಯಗಳು, ಮುರಿತ ಹಾಗೂ ನೋವಿನ ನಡುವೆಯೂ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅಶ್ವಿನ್ ಮತ್ತು ವಿಹಾರಿ ಆಟವನ್ನು ನಾವು ಸ್ಮರಿಸಬೇಕಿದೆ. ಜೊತೆಗೆ ಪಂತ್ ಕೂಡ ನಮ್ಮ ಯೋಜನೆಯಂತೆ ಆಡಿದರು. ಒಟ್ಟಾರೆ ಈ ಪಂದ್ಯದಲ್ಲಿ ನಮ್ಮ ಯೋಜನೆ ಎಲ್ಲ ಯಶಸ್ವಿಯಾದವು ಎಂದು ಪಂದ್ಯದ ನಂತರ ರಹಾನೆ ಹೇಳಿದ್ದಾರೆ.