ಬ್ರಿಸ್ಬೇನ್:ಆರಂಭಿಕ ಆಘಾತದ ನಡುವೆಯೂ ಚೆತರಿಸಿಕೊಂಡ ಆಸ್ಟ್ರೇಲಿಯಾ ಮಾರ್ನಸ್ ಲಾಬುಶೇನ್ ಅವರ ಉಪಯುಕ್ತ ಶತಕದ ನೆರವಿನಿಂದ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 274 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲೂ ವಿಫಲರಾಗಿದ್ದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಕೇವಲ ಒಂದು ರನ್ ಗಳಿಸಿ ಮೊದಲ ಓವರ್ನಲ್ಲೇ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ರು.
ಪೊಕೀವ್ಸ್ಕಿ ಬದಲು ಆರಂಭಿಕನಾಗಿ ಕಣಕ್ಕಿಳಿದಿದ್ದ ಮರ್ಕಸ್ ಹ್ಯಾರಿಸ್ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಬೌಲಿಂಗ್ಗೆ ಇಳಿದ ಮೊದಲ ಓವರ್ನಲ್ಲೇ ಹ್ಯಾರಿಸ್ ವಿಕೆಟ್ ಪಡೆದ ಶಾರ್ದೂಲ್ ಠಾಕೂರ್, ಭಾರತಕ್ಕೆ ಮೇಲುಗೈ ತಂದುಕೊಟ್ರು.
ಬಳಿಕ 3ನೇ ವಿಕೆಟ್ಗೆ ಜೊತೆಯಾಗಿರುವ ಲಾಬುಶೇನ್ ಮತ್ತು ಸ್ಮಿತ್ 70 ರನ್ಗಳ ಜೊತೆಯಾಟವಾಡಿದರು. ಕಳೆದ ಪಂದ್ಯದಂತೆ ಟೀಂ ಇಂಡಿಯಾ ಕಾಡುತ್ತಿದ್ದ ಈ ಜೋಡಿಯನ್ನು ವಾಷಿಂಗ್ಟನ್ ಸುಂದರ್ ಬೇರ್ಪಡಿಸಿದ್ರು. 36 ರನ್ ಗಳಿಸಿದ್ದ ಸ್ಮಿತ್ ಸುಂದರ್ ಎಸೆತದಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಜೊತೆಯಾದ ವೇಡ್ ಮತ್ತು ಲಾಬುಶೇನ್ ಆಸೀ ತಂಡದ ಸ್ಕೋರ್ ಹೆಚ್ಚಿಸಿದ್ರು. ತಾಳ್ಮೆಯ ಆಟವಾಡಿದ ಲಾಬುಶೇನ್ ಟೆಸ್ಟ್ ಕ್ರಿಕೆಟ್ನಲ್ಲಿ 5ನೇ ಶತಕ ಸಿಡಿಸಿ ಮಿಂಚಿದ್ರು. 4ನೇ ವಿಕೆಟ್ಗೆ ಈ ಜೋಡಿ 113 ರನ್ಗಳನ್ನು ಕಲೆಹಾಕಿತು.
45 ರನ್ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವೇಡ್, ನಟರಾಜನ್ ಎಸೆತದಲ್ಲಿ ಶಾರ್ದೂಲ್ ಠಕೂರ್ಗೆ ಕ್ಯಾಚ್ ನೀಡಿನಿರ್ಗಮಿಸಿದರು. ಮುಂದಿನ 2 ಓವರ್ಗಳ ಅಂತರದಲ್ಲೇ ಮತ್ತೆ ದಾಳಿಗಿಳಿದ ನಟರಾಜನ್ ಶತಕ ಸಿಡಿಸಿದ್ದ ಲಾಬುಶೇನ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ರು.
ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿದ್ದು, ಗ್ರೀನ್ 28 ಮತ್ತು ಟಿಮ್ ಪೇನ್ 38 ರನ್ಗಳಿಸಿ ಬ್ಯಾಟಿಂಗ್ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ನಟರಾಜನ್ 2 ವಿಕೆಟ್ ಪಡೆದ್ರೆ, ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.