ಸಿಡ್ನಿ: ರಿಷಭ್ ಪಂತ್ ಮತ್ತು ಪೂಜಾರ ವಿಕೆಟ್ ಪಡೆದು ಗೆಲುವಿನ ಆಸೆ ಹೊತ್ತಿದ್ದ ಆಸೀಸ್ ಆಟಗಾರ ಕನಸಿಗೆ ತಣ್ಣೀರೆರಚಿದ ಹನುಮ ವಿಹಾರಿ ಮತ್ತು ಆರ್. ಅಶ್ವಿನ್ ಜೋಡಿ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದೆ.
ಸಿಡ್ನಿ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. 5ನೇ ದಿನದ ಆರಂಭದಲ್ಲಿ ರಹಾನೆ ವಿಕೆಟ್ ಬೀಳುತ್ತಿದ್ದಂತೆ ಜೊತೆಯಾದ ರಿಷಭ್ ಪಂತ್ ಮತ್ತು ಪೂಜಾರ ಜೋಡಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿತ್ತು. ಆದರೆ ಈ ಇಬ್ಬರು ಆಟಗಾರರ ನಿರ್ಗಮನದ ನಂತರ ಪಂದ್ಯ ಆಸೀಸ್ನತ್ತ ವಾಲಿತ್ತು. ಗಾಯದ ನಡುವೆಯೂ ತಾಳ್ಮೆಯ ಆಟವಾಡಿದ ಹನುಮ ವಿಹಾರಿ ಮತ್ತು ಆರ್. ಆಶ್ವಿನ್ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ್ರು. ಈ ಮೂಲಕ 4 ಪಂದ್ಯದಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು ಸರಣಿ ಸಮಬಲ ಸಾಧಿಸಿದೆ.
ಭಾರತ ನಾಲ್ಕನೇ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಐದನೇ ದಿನದ ಆರಂಭದಲ್ಲಿ ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ನಿರಾಸೆ ಅನುಭವಿಸಿತು. ದಿನದ ಎರಡನೇ ಓವರ್ನಲ್ಲೇ ನಾಯಕ ಅಜಿಂಕ್ಯ ರಹಾನೆ ಕೇವಲ 4 ರನ್ ಗಳಿಸಿ ಲಿಯಾನ್ಗೆ ವಿಕೆಟ್ ಒಪ್ಪಿಸಿದ್ರು.
ನಾಯಕನ ನಿರ್ಗಮನದ ನಂತರ ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ರು. ಪಂದ್ಯ ಡ್ರಾ ಮಾಡುವುದು ಕಷ್ಟ ಎಂದು ಹೇಳಿದ್ದ ಹಲವು ಪಂಡಿತರ ಬಾಯಿಗೆ ಬೀಗ ಹಾಕಿದ ಪಂತ್ ಮತ್ತು ಪೂಜಾರ ಜೋಡಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದೆ.
ಈ ಜೋಡಿ 4ನೇ ವಿಕೆಟ್ಗೆ ಭರ್ಜರಿ 148 ರನ್ಗಳ ಕಾಣಿಕೆ ನೀಡಿತು. ಬೌಂಡರಿ ಸಿಕ್ಸರ್ಗಳಿಂದ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ 97 ರನ್ ಗಳಿಸಿರುವಾಗ ಲಿಯಾನ್ ಎಸೆತದಲ್ಲಿ ಕಮ್ಮಿನ್ಸ್ಗೆ ಕ್ಯಾಚ್ ನೀಡಿ ಶತಕ ವಂಚಿತರಾದರು. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿದ್ದ ಪೂಜಾರ ದ್ವಿತೀಯ ಇನ್ನಿಂಗ್ಸ್ನಲ್ಲೂ ಅರ್ಧಶತಕ ಸಿಡಿಸಿದ್ರು.
77 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಪೂಜಾರ ಹೆಜಲ್ವುಡ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ರು. ನಂತರ ಜೊತೆಯಾದ ಹನುಮ ವಿಹಾರಿ ಮತ್ತು ಆರ್.ಅಶ್ವಿನ್ ಆಸೀಸ್ ಬೌಲರ್ಗಳ ಬೆವರಿಳಿಸಿದ್ರು.
ಒಂದೆಡೆ ಹನುಮ ವಿಹಾರಿ ಮಂಡಿರುಜ್ಜು ಗಾಯಕ್ಕೆ ತುತ್ತಾದರೆ, ಮತ್ತೊಂದೆಡೆ ಆರ್. ಅಶ್ವಿನ್ ಅವರ ಭುಜ ಮತ್ತು ಹೊಟ್ಟೆಗೆ ಚೆಂಡು ಬಡಿದು ಗಾಯಗೊಂಡರು. ಆದರೂ ಛಲ ಬಿಡದೇ ಆಸೀಸ್ ಬೌಲರ್ಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. ಈ ಇಬ್ಬರ ವಿಕೆಟ್ ಪಡೆಯಲೆಂದು ಯತ್ನಿಸಿದ ಆಸೀಸ್ ಬೌಲರ್ಗಳ ಸರ್ವ ಪ್ರಯತ್ನವೂ ವಿಫಲವಾಯಿತು.
ಅಂತಿಮ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 334 ರನ್ಗಳಿಸಿದ ಪರಿಣಾಮ ಪಂದ್ಯ ಡ್ರಾನಲ್ಲಿ ಅಂತ್ಯವಾಯ್ತು. 6ನೇ ವಿಕೆಟ್ಗೆ ಹನುಮ ವಿಹಾರಿ ಮತ್ತು ಅಶ್ವಿನ್ ಜೋಡಿ 256 ಚೆಂಡು ಎದುರಿಸಿ 62 ರನ್ ಕಲೆಹಾಕಿತು. 161 ಬಾಲ್ ಎದುರಿಸಿದ ವಿಹಾರಿ 23 ರನ್ ಗಳಿಸಿದ್ರೆ, 128 ಚೆಂಡು ಎದುರಿಸಿದ ಅಶ್ವಿನ್ 39 ರನ್ ಗಳಿಸಿ ಅಜೇಯರಾಗಿ ಉಳಿದ್ರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 338 ರನ್ಗಳಿಗೆ ಆಲೌಟ್ ಆಗಿದ್ರೆ, ಭಾರತ 244 ರನ್ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ 312 ರನ್ ಗಳಿಸಿ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ, ಭಾರತಕ್ಕೆ 407 ರನ್ಗಳ ಗುರಿ ನೀಡಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 334 ರನ್ ಗಳಿಸಿದ ಪರಿಣಾಮ ಡ್ರಾನಲ್ಲಿ ಅಂತ್ಯವಾಯ್ತು.