ಪಾಟ್‌ಶೆಫ್‌ಸ್ಟ್ರೂಮ್(ದಕ್ಷಿಣ ಆಫ್ರಿಕಾ) :ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡ ಭಾರತವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಭಾರತ ನೀಡಿದ್ದ 178 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಟೀಂ ಇಂಡಿಯಾ ಬೌಲರ್ಗಳು ಆರಂಭಿಕ ಆಘಾತ ನೀಡಿದ್ರು. ಉತ್ತಮ ಬೌಲಿಂಗ್ ನಡೆಸಿದ ರವಿ ಬಿಷ್ನೋಯಿ ಪ್ರಮುಖ ನಾಲ್ಕು ಆಟಗಾರರನ್ನ ಪೆವಿಲಿಯನ್ನತ್ತ ಹೆಜ್ಜೆ ಹಾಕಿಸಿದ್ರು. 102 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಬಾಂಗ್ಲಾ ತಂಡಕ್ಕೆ ಮಹಮುದುಲ್ ಹಸನ್ ಜಾಯ್ ಮತ್ತು ನಾಯಕ ಅಕ್ಬರ್ ಅಲಿ ಆಸರೆಯಾದ್ರು.
ಟೀಂ ಇಂಡಿಯಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಹಸನ್ ಜಾಯ್ 47 ರನ್ ಗಳಿಸಿ ಔಟ್ ಆದ್ರು. ಒಂದೆಡೆ ವಿಕೆಟ್ ಬಿದ್ದರೂ ತಾಳ್ಮೆಯ ಆಟವಾಡಿದ ನಾಯಕ ಅಕ್ಬರ್ ಅಲಿ (43) ತಂಡವನ್ನ ಗೆಲುವಿನತ್ತ ಮುನ್ನಡೆಸಿದ್ರು.
41 ಓವರ್ ಮುಕ್ತಾಯಕ್ಕೆ ಬಾಂಗ್ಲಾ ತಂಡ 7 ವಿಕೆಟ್ ಕಳೆದುಕೊಂಡು 163ರನ್ ಗಳಿಸಿತು. ಈ ವೇಳೆ ಮಳೆ ಬಂದ ಕಾರಣ ಸ್ವಲ್ಪ ಸಮಯದ ಕಾಲ ಪಂದ್ಯ ಸ್ಥಗಿತಗೊಂಡಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಬಾಂಗ್ಲಾ ತಂಡಕ್ಕೆ 46 ಓವರ್ಗಳಿಗೆ 170 ರನ್ ಗಳಿಸುವ ಅವಕಾಶ ನೀಡಲಾಯಿತು.
ಅಂತಿಮವಾಗಿ ಬಾಂಗ್ಲಾ ತಂಡ 42.1 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ಗಳಿಸಿ, ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು. ಟೀಂ ಇಂಡಿಯಾ ಪರ ರವಿ ಬಿಷ್ನೋಯಿ 4 ವಿಕೆಟ್, ಸುಶಾಂತ್ ಮಿಶ್ರಾ 2 ಮತ್ತು ಯಶಸ್ವಿ ಜೈಸ್ವಾಲ್ 1 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಧಾನಗತಿ ಆರಂಭ ಪಡೆಯಿತು. ಪಾಕಿಸ್ತಾನದ ವಿರುದ್ಧ ಅದ್ಭುತ ಬ್ಯಾಟಿಂಗ್ ನಡೆಸಿದ್ದ ದಿವ್ಯಾನ್ಶ್ ಸಕ್ಸೇನಾ 17 ಎಸೆತಗಳನ್ನೆದುರಿಸಿ ಕೇವಲ 2 ರನ್ಗಳಿಗೆ ಔಟಾದರು. ನಂತರ ಬಂದ ತಿಲಕ್ ವರ್ಮಾ ಜೈಸ್ವಾಲ್ ಜೊತೆ ಸೇರಿ ಎರಡನೇ ವಿಕೆಟ್ಗೆ 94 ರನ್ಗಳ ಜೊತೆಯಾಟ ನೀಡಿದರು.
ಈ ಹಂತದಲ್ಲಿ ಅವಿಶೇಕ್ ದಾಸ್ ಬೌಲಿಂಗ್ನಲ್ಲಿ 38 ರನ್ಗಳಿಸಿದ್ದ ತಿಲಕ್ ವರ್ಮಾ, ತಂಜಿಮ್ ಬೌಲಿಂಗ್ನಲ್ಲಿ ಮೊಹಮ್ಮದ್ ಹಸನ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ನಾಯಕ ಪ್ರಿಯಂ ಗರ್ಗ್ ಕೇವಲ 7 ರನ್ಗಳಿಸಿ ರಕಿಬುಲ್ ಹಸ್ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಅದ್ಭುತ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 121 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಉಳಿದಂತೆ ಜುರೆಲ್ 22 ರನ್ಗಳಿಸಿ ಬೇಡದ ರನ್ ಕದಿಯಲು ಹೋಗಿ ರನ್ಔಟಾಗುವ ಮೂಲಕ ಭಾರತಕ್ಕೆ ನಿರಾಶೆ ಮೂಡಿಸಿದರು. ಸಿದ್ದೇಶ್ ವೀರ್(0), ಅಥರ್ವ ಅಂಕೋಲಕರ್ 3, ರವಿ ಬಿಷ್ನೋಯ್ 2, ಸುಶಾಂತ್ ಮಿಶ್ರಾ 1, ಕಾರ್ತಿಕ್ ತ್ಯಾಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಒಟ್ಟಾರೆ ಭಾರತ 47.2 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶದ ಪರ ಶೋರಿಫ್ ಇಸ್ಲಾಮ್ 31ಕ್ಕೆ 2, ತಂಜಿಮ್ ಹಸನ್ ಸಕಿಭ್ 2, ಅವಿಶೇಕ್ ದಾಸ್ 40ಕ್ಕೆ3 ಹಾಗೂ ರಕಿಬುಲ್ ಹಸಮ್ ಒಂದು ವಿಕೆಟ್ ಪಡೆದರು.
ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಕ್ಬರ್ ಅಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರೆ, ಸರಣಿಯುದ್ದಕ್ಕೂ ಟೀಂ ಇಂಡಿಯಾ ಪರ ಭರ್ಜರಿ ಆಟವಾಡಿದ್ದ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು.