ಫ್ಲೋರಿಡಾ: ವಿಶ್ವಕಪ್ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾ ಅಂಗಳಕ್ಕಿಳಿಯುತ್ತಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದ ಮೂಲಕ ಕೆರಿಬಿಯನ್ ಪ್ರವಾಸ ಆರಂಭಿಸಲಿದೆ.
ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಲು ಟೀಂ ಇಂಡಿಯಾ ಹೋರಾಡಲಿದೆ. ಅಲ್ಲದೆ ಕೊಹ್ಲಿ ನಾಯಕತ್ವದ ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕೆರಿಬಿಯನ್ ಪ್ರವಾಸವು ಮಹತ್ವ ಪಡೆದುಕೊಂಡಿದೆ. ಮೂರು ಪಂದ್ಯಗಳ ಟಿ-20 ಸರಣಿಯ ಬಳಿಕ ಏಕದಿನ ಹಾಗೂ ಟೆಸ್ಟ್ ಸರಣಿ ನಡೆಯಲಿದ್ದು, ಟಿ-20 ವಿಶ್ವ ಚಾಂಪಿಯನ್ಸ್ ಕೆರಿಬಿಯನ್ನರನ್ನು ಮಣಿಸುವುದು ಸುಲಭವಲ್ಲ.
ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹಲವು ಯುವ ಆಟಗಾರರು ಸ್ಥಾನ ಪಡೆದಿದ್ದು ಆಡುವ 11ರ ಬಳಗದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಮಾಜಿ ನಾಯಕ ಎಂ.ಎಸ್ ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಅದ್ಭುತ ಅವಕಾಶವಿದೆ. ಪ್ರವಾಸಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ನಾಯಕ ವಿರಾಟ್, ಯುವ ಪ್ರತಿಭೆಗಳಿಗೆ ಈ ಸರಣಿಯು ಸಾಮರ್ಥ್ಯ ತೋರ್ಪಡಿಸಲು ಉತ್ತಮ ವೇದಿಕೆಯಾಗಲಿದೆ ಎಂದಿದ್ದರು. ಯುವ ಬೌಲರ್ಗಳಾದ ರಾಹುಲ್ ಚಹರ್ ಹಾಗೂ ನವದೀಪ್ ಸೈನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈಗಷ್ಟೇ ಪಾದಾರ್ಪಣೆ ಮಾಡಬೇಕಿದ್ದು, ಅಲ್ಲದೆ ಮನೀಶ್ ಪಾಂಡೆ, ಖಲೀಲ್ ಅಹಮದ್ ಹಾಗೂ ಶ್ರೇಯಸ್ ಅಯ್ಯರ್ ಕೂಡ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.