ಮೆಲ್ಬೋರ್ನ್: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಡಿಸೆಂಬರ್ 17 ರಿಂದ ಅಡಿಲೇಡ್‌ನಲ್ಲಿ ನಡೆಯುವ ಅಹರ್ನಿಶಿ ಪಂದ್ಯದ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಪ್ರಾರಂಭಿಸಲಿದೆ.
ಅಡಿಲೇಡ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವಾಗಲಿದೆ. ಈ ಹಿಂದೆ ಎರಡೂ ತಂಡಗಳು ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಸೋತಿಲ್ಲ. ಆಸ್ಟ್ರೇಲಿಯಾ ತಂಡವು ಅಡಿಲೇಡ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ನಾಲ್ಕು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲೂ ಗೆಲುವು ಸಾಧಿಸಿದೆ. ಇತ್ತ ಟೀಂ ಇಂಡಿಯಾ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಈಡನ್ ಗಾರ್ಡನ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತ್ತು.
ಐಸಿಸಿ ಟೆಸ್ಟ್ ಶ್ರೇಯಾಂಕಿತರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ. ಆದಾಗ್ಯೂ, 2018-19ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧದ ಈ ಹಿಂದಿನ ನಾಲ್ಕು ಸರಣಿಗಳಲ್ಲಿ ಮೂರರಲ್ಲಿ ಗೆದ್ದಿರುವ ಭಾರತ ಜಯ ಸಾಧಿಸುವ ವಿಶ್ವಾಸದಲ್ಲಿದೆ.