ಕೊಲಂಬೊ:ಸೆಪ್ಟೆಂಬರ್ 27ರಿಂದ ಪಾಕ್ನಲ್ಲಿ ಆರಂಭಗೊಳ್ಳಬೇಕಾಗಿದ್ದ ಪಾಕ್-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಗೆ ತೆರಳಲು ಲಂಕಾ ಪ್ಲೇಯರ್ಸ್ ನಿರಾಕರಣೆ ಮಾಡಿದ್ದರಿಂದ ಇದರ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಸಚಿವ ಫವಾದ್ ಹುಸೇನ್ ಚೌಧರಿ ಟ್ವೀಟ್ ಮಾಡಿದ್ದರು. ಇದೀಗ ಇದಕ್ಕೆ ಅಲ್ಲಿನ ಕ್ರೀಡಾ ಸಚಿವ ಸಖತ್ ಆಗಿ ಟಾಂಗ್ ನೀಡಿದ್ದಾರೆ.
ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಡೋ ಪ್ರತಿಕ್ರಿಯೆ ನೀಡಿ, ನಮ್ಮ ಪ್ಲೇಯರ್ಸ್ ಪಾಕ್ ತೆರಳದಿರುವ ಹಿಂದೆ ಭಾರತದ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿದ್ದು, 2009ರಲ್ಲಿ ನಮ್ಮ ಪ್ಲೇಯರ್ಸ್ ಮೇಲೆ ನಡೆದಿರುವ ದಾಳಿಯಿಂದಾಗಿ ಕೆಲ ಪ್ಲೇಯರ್ಸ್ ಖುದ್ದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದಾಗ್ಯೂ ಇದೀಗ ನಮ್ಮ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದು, ಪಾಕ್ ನೆಲದಲ್ಲೇ ಅವರಿಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 27ರಿಂದ ಪಾಕಿಸ್ತಾನದಲ್ಲಿ ಆರಂಭಗೊಳ್ಳಬೇಕಾಗಿದ್ದ ಸರಣಿಯಲ್ಲಿ ಮುಖ್ಯ ಪ್ಲೇಯರ್ಸ್ಗಳಾದ ನಿರೋಷನ್ ಡಿಕ್ವೆಲ್ಲಾ, ಕುಸಲ್ ಜಾನಿತ್ ಪೆರೆರಾ, ಧನಂಜಯ ಡಿ ಸಿಲ್ವಾ,ಥಿಸರಾ ಪೆರೆರಾ, ಅಕಿಲಾ ಧನಂಜಯ, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ಸುರಂಗ ಲಕ್ಮಲ್, ದಿನೇಶ್ ಚಂಡಿಮಾಲ್ ಹಾಗೂ ದಿಮುತ್ ಕರುಣರತ್ನ ಪ್ರವಾಸದಿಂದ ಹೊರಗೆ ಉಳಿಯಲು ನಿರ್ಧರಿಸಿದ್ದಾರೆ.
ಪಾಕಿಸ್ತಾನ ತಂತ್ರಜ್ಞಾನ ಸಚಿವ
ಇದೇ ವಿಷಯವನ್ನಿಟ್ಟುಕೊಂಡು ಪಾಕ್ನ ಸಚಿವ ಭಾರತದ ಮೇಲೆ ಬೆರಳು ತೋರಿ ಇದರ ಹಿಂದೆ ಭಾರತದ ಕೈವಾಡವಿದೆ ಎಂಬ ಹೇಳಿಕೆ ನೀಡಿದ್ದು. ಇದೀಗ ಅವರಿಗೆ ಶ್ರೀಲಂಕಾ ಕ್ರೀಡಾ ಸಚಿವ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಪಾಕ್ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಕೆಲ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲು ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್ಗೆ ಇದೇ ತಿಂಗಳು ಪ್ರಯಾಣ ಬೆಳೆಸಬೇಕಾಗಿತ್ತು. ಸೆಪ್ಟೆಂಬರ್ 27ರಂದು ಮೊದಲ ಏಕದಿನ, ಸೆಪ್ಟಂಬರ್ 29ರಂದು ಎರಡನೇ ಏಕದಿನ ಹಾಗೂ ಅಕ್ಟೋಬರ್ 2ರಂದು ಮೂರನೇ ಏಕದಿನ ಹಾಗೂ ಅಕ್ಟೋಬರ್ 5ರಂದು ಮೊದಲ ಟಿ -20 ಪಂದ್ಯದಲ್ಲಿ ಲಂಕಾ ತಂಡ ಭಾಗಿಯಾಗಬೇಕಾಗಿತ್ತು. ಎಲ್ಲ ಪಂದ್ಯಗಳು ಕರಾಚಿ ಹಾಗೂ ಲಾಹೋರ್ನಲ್ಲಿ ನಡೆಯಲು ವೇಳಾಪಟ್ಟಿ ಸಹ ಫೈನಲ್ ಆಗಿದೆ.