ನವದೆಹಲಿ:ಹಿರಿಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಮರಳಬೇಕು ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಏಕದಿನ ಸರಣಿಗೆ ಕಮ್ಬ್ಯಾಕ್ ಮಾಡಬಹುದಾ, ಆಯ್ಕೆಗಾರರು, ಅವರನ್ನು ಆಲ್ರೌಂಡರ್ ಆಗಿ ತಂಡಕ್ಕೆ ಆಯ್ಕೆ ಮಾಡಬಹುದೇ? ಎಂದು ಅಭಿಮಾನಿಯೊಬ್ಬ, ಬ್ರಾಡ್ ಹಾಗ್ ಮತ್ತು ಸಂಜಯ್ ಮಾಂಜ್ರೇಕರ್ ಅವರನ್ನು ಟ್ವಿಟರ್ ಮೂಲಕ ಕೇಳಿಕೊಂಡಿದ್ದ.
ಇದಕ್ಕೆ ಉತ್ತರಿಸಿರುವ ಹಾಗ್, ಖಂಡಿತ ಇದು ಅದ್ಭುತ ಆಯ್ಕೆ, ಬ್ಯಾಟಿಂಗ್ ಲೈನ್ಅಪ್ ಹೆಚ್ಚು ಆಳಕ್ಕೆ ಹೋಗುತ್ತದೆ, ಜೊತೆಗೆ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ ಆಕ್ರಮಣಕಾರಿ ಆಟವಾಡುವುದಕ್ಕೆ ಅನುವು ಮಾಡಿಕೊಡಲಿದೆ. ಜೊತೆಗೆ ಅವರು ಉತ್ತಮ ಎಕಾನಮಿಯಲ್ಲಿ ವಿಕೆಟ್ ಪಡೆಯಬಲ್ಲ ಬೌಲರ್. ಹಾಗಾಗಿ ಅವರನ್ನು ತಂಡಕ್ಕೆ ಕರೆಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಶ್ವಿನ್ ಭಾರತದ ಮತ್ತು ಐಪಿಎಲ್ನಲ್ಲಿ ಖಾಯಂ ಆಟಗಾರರಾಗಿದ್ದಾರೆ. ಆದರೆ ಅವರು 2017ರಿಂದಲೂ ಭಾರತ ಸೀಮಿತ ತಂಡದಿಂದ ಹೊರಗುಳಿದಿದ್ದಾರೆ. 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿ ಏಕದಿನ ಮತ್ತು ಟಿ20 ಪಂದ್ಯವನ್ನಾಡಿದ್ದರು. ಅಶ್ವಿನ್ 111 ಏಕದಿನ ಪಂದ್ಯಗಳಲ್ಲಿ 150 ಮತ್ತು 46 ಟಿ20 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ.