ಬ್ರಿಸ್ಬೇನ್ :ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ಗಳ ರೋಚಕ ಜಯ ಗಳಿಸಿ ಸರಣಿ ಗೆದ್ದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ತವರಿನಲ್ಲಿ ಸರಣಿ ಕಳೆದುಕೊಂಡ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ.
ಗಬ್ಬಾ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ಕೊನೆಗೊಂಡ ಪಂದ್ಯದಲ್ಲಿ ಜಯಸಾಧಿಸಿದ ಭಾರತ ತಂಡ 71.7ರ ಗೆಲುವಿನ ಸರಾಸರಿಯೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸ್ಥಾನ ಮರಳಿ ಪಡೆದುಕೊಂಡ್ರೆ, 70 ಗೆಲುವಿನ ಸರಾಸರಿ ಅಂಕ ಹೊಂದಿರುವ ನ್ಯೂಜಿಲ್ಯಾಂಡ್ ತಂಡ 2ನೇ ಸ್ಥಾನದಲ್ಲೇ ಉಳಿದಿದೆ.
ಆಸ್ಟ್ರೇಲಿಯಾ 69.2 ಸರಾಸರಿ ಅಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆದರೆ, ಆಸ್ಟ್ರೇಲಿಯಾಕ್ಕೆ ಇನ್ನು ಒಂದು ಸರಣಿ ಬಾಕಿಯುಳಿದಿದ್ದು, ಮತ್ತೆ ಮೊದಲೆರಡು ಸ್ಥಾನ್ಕಕ್ಕೇರುವ ಅವಕಾಶವಿದೆ. ಇದಕ್ಕೂ ಮುನ್ನ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಹೊಂದಿದೆ. ಆ ಸರಣಿಯಲ್ಲಿ 2-0ಯಲ್ಲಿ ಗೆದ್ದರೆ ಜೂನ್ನಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಪಡೆಯಲಿದೆ. ಜೂನ್ ತಿಂಗಳಲ್ಲಿ ಫೈನಲ್ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಇದನ್ನು ಓದಿ:ಈ ಗೆಲುವು ನನ್ನ ಜೀವನದಲ್ಲೇ ಅತ್ಯಂತ ಶ್ರೇಷ್ಠ ಕ್ಷಣ : ರಿಷಭ್ ಪಂತ್