ಹೈದರಾಬಾದ್: ಕಳೆದ ಬಾರಿ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಕೊಹ್ಲಿ ಪಡೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಸರಣಿಯಲ್ಲಿ ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, ಉಳಿದೆಲ್ಲಾ ಪಂದ್ಯಗಳನ್ನು ಭಾರತ ತಂಡ ಗೆದ್ದುಕೊಂಡಿತ್ತು.
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟು 33 ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ ತಂಡ 19 ಭಾರತ ತಂಡ 10ರಲ್ಲಿ ಗೆದ್ದಿದ್ದರೆ, 4 ಸರಣಿಗಳು ಡ್ರಾನಲ್ಲಿ ಅಂತ್ಯವಾಗಿವೆ. ಇನ್ನು ಭಾರತದಲ್ಲಿ 1932ರಿಂದ ನಡೆದಿರುವ 14 ಸರಣಿಗಳಲ್ಲಿ ಇಂಗ್ಲೆಂಡ್ 4ರಲ್ಲಿ ಜಯಸಿದ್ದರೆ, ಭಾರತ 8ರಲ್ಲಿ ಜಯಿಸಿದೆ. 3 ಸರಣಿಗಳು ಡ್ರಾನಲ್ಲಿ ಅಂತ್ಯಗೊಂಡಿದೆ.
2012-13ರ ಪ್ರವಾಸದಲ್ಲಿ ಇಂಗ್ಲೆಂಡ್ 2-1ರಲ್ಲಿ ಸರಣಿ ಗೆದ್ದು ಆತಿಥೇಯರಿಗೆ ಆಘಾತ ನೀಡಿ 28 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಜಯಿಸಿತ್ತು. ಈ ಸರಣಿ ಕೊನೆಯ 4 ಪಂದ್ಯಗಳ ಸರಣಿಯಾಗಿತ್ತು. ನಂತರ ಎರಡು ತಂಡಗಳೂ 5 ಪಂದ್ಯಗಳ ಸರಣಿಯನ್ನಾಡುತ್ತಾ ಬಂದಿವೆ. 2016ರಲ್ಲಿ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಭಾರತದೆದುರು ಆಂಗ್ಲರು ಸಂಪೂರ್ಣ ಶರಣಾಗತಾರಾಗಿದ್ದರು. ಮೊದಲ ಪಂದ್ಯ ಡ್ರಾನಲ್ಲಿ ಆಂತ್ಯಗೊಂಡರೆ, ನಂತರದ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಪಡೆ ಕ್ರಮವಾಗಿ 246 ರನ್, 8 ವಿಕೆಟ್, ಇನ್ನಿಂಗ್ಸ್ ಮತ್ತು 36 ರನ್ ಹಾಗೂ ಇನ್ನಿಂಗ್ಸ್ ಮತ್ತು 75 ರನ್ಗಳ ಪ್ರಾಬಲ್ಯದ ಜಯ ಸಾಧಿಸಿತ್ತು.
ನಾಯಕ ಕೊಹ್ಲಿ ಒಂದು ದ್ವಿಶತಕ ಹಾಗೂ ಒಂದು ಶತಕದ ಸಹಿತ 655 ರನ್ ಚಚ್ಚಿದರೆ, ಪೂಜಾರ 401, ಮುರಳಿ ವಿಜಯ್ 357, ಕರುಣ್ ನಾಯರ್ 320 ರನ್ ಗಳಿಸಿದ್ದರು. ಬೌಲಿಂಗ್ನಲ್ಲಿ ಅಶ್ವಿನ್ 28, ಜಡೇಜಾ 26 ವಿಕೆಟ್ ಪಡೆದು ಪ್ರಾಬಲ್ಯ ಸಾಧಿಸಿದ್ದರು.
ಭಾರತದಲ್ಲಿ ಇಂಗ್ಲೆಂಡ್ 60 ಟೆಸ್ಟ್ ಪಂದ್ಯಗಳನ್ನಾಡಿದ್ದು, ಸುನೀಲ್ ಗವಾಸ್ಕರ್ 1331 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಆಗಿದ್ದಾರೆ. ಅವರನ್ನು ಬಿಟ್ಟರೆ ಇಂಗ್ಲೆಂಡ್ ಮಾಜಿ ನಾಯಕ ಆಲಿಸ್ಟರ್ ಕುಕ್ 1235 ರನ್ ಗಳಿಸಿದ್ದಾರೆ. ಪ್ರಸ್ತುತ ಆಟಗಾರರಲ್ಲಿ ವಿರಾಟ್ ಕೊಹ್ಲಿ 70.25ರ ಸರಾಸರಿಯಲ್ಲಿ 843 ರನ್ ಳಿಸಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್ 53ರ ಸರಾಸರಿಯಲ್ಲಿ 584 ರನ್ ಗಳಿಸಿದ್ದಾರೆ.
ಇನ್ನು ಭಾರತದಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳಲ್ಲಿ ಬಿ.ಚಂದ್ರಶೇಖರ್( 64) ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 54 ವಿಕೆಟ್ ಪಡೆದಿರುವ ಡೆರೆಕ್ ಅಂಡರ್ವುಡ್ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ಬೌಲರ್ಗಳಲ್ಲಿ ಅಶ್ವಿನ್ 42 ವಿಕೆಟ್ ಪಡೆದಿದ್ದರೆ, ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 26 ವಿಕೆಟ್ ಪಡೆದಿದ್ದಾರೆ.
ಫೆಬ್ರವರಿ 5ರಿಂದ ಎರಡು ತಂಡಗಳ ನಡುವೆ ಸರಣಿ ಆರಂಭವಾಗಲಿದ್ದು, ಆಸ್ಟ್ರೇಲಿಯಾ ವಿರುದ್ಧ ಅವರ ನೆಲದಲ್ಲೇ 2-1ರಲ್ಲಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಅದೇ ಆತ್ಮವಿಶ್ವಾಸದಲ್ಲಿ ಆಂಗ್ಲರ ವಿರುದ್ಧ ಪ್ರಾಬಲ್ಯ ಸಾಧಿಸಲು ಕಾತುರದಿಂದ ಕಾಯುತ್ತಿದೆ. ಕಳೆದ ಸರಣಿಯಲ್ಲಿ ಹೊರಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ, ಅನುಭವಿ ವೇಗಿ ಇಶಾಂತ್ ಶರ್ಮಾ ತಂಡಕ್ಕೆ ಮರಳಿರುವುದು ಭಾರತ ತಂಡಕ್ಕೆ ಆನೆ ಬಲ ಬಂದಂತಾಗಿದೆ.