ಮೆಲ್ಬೋರ್ನ್: ಭಾರತ ತಂಡ 4ನೇ ಟೆಸ್ಟ್ಗಾಗಿ ಬ್ರಿಸ್ಬೇನ್ಗೆ ತೆರಳುವುದಕ್ಕೆ ಯಾವುದೇ ತಕರಾರು ತೆಗೆದಿಲ್ಲ. ಅವರು ಕ್ವೀನ್ಸ್ಲ್ಯಾಂಡ್ಸ್ನ ಕಠಿಣ ಕ್ವಾರಂಟೈನ್ ನಿಯಮವನ್ನು ಪಾಲಿಸಲು ಸಂಪೂರ್ಣ ಒಪ್ಪಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಸ್ಪಷ್ಟನೆ ನೀಡಿದ್ದಾರೆ.
ಬಾರ್ಡರ್ ಗವಾಸ್ಕರ್ ಸರಣಿ 4ನೇ ಪಂದ್ಯ ಬ್ರಿಸ್ಬೇನ್ನ ಗಬ್ಬಾದಲ್ಲಿ ನಿಗದಿಯಾಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಟ್ಟುನಿಟ್ಟಾದ ಕ್ವಾರಂಟೈನ್ ನಿಯಮವಿದ್ದು, ಯಾರೇ ರಾಜ್ಯ ಪ್ರವೇಶಿಸಿದರು 14 ದಿನಗಳ ಕ್ವಾರಂಟೈನ್ ಮಾಡಬೇಕಿದೆ. ಆದರೆ ಇದಕ್ಕೆ ಭಾರತೀಯರು ಒಪ್ಪುತ್ತಿಲ್ಲ ಎಂದು ಕೆಲವು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕ್ವೀನ್ಸ್ ಲ್ಯಾಂಡ್ ಸರ್ಕಾರದ ಆರೋಗ್ಯ ಸಚಿವರು, "ಟೀಮ್ ಇಂಡಿಯಾ ನಿಯಮ ಪಾಲಿಸಿ ಆಡಲು ಒಪ್ಪದಿದ್ದರೆ, ಅವರು ಇಲ್ಲಿಗೆ ಬರುವುದೇ ಬೇಡ" ಎಂದು ಹೇಳಿಕೆ ನೀಡಿದ್ದರು. ಆದರೆ ಇದೆಲ್ಲಾ ಕೇವಲ ಗಾಳಿ ಸುದ್ದಿ. ಭಾರತೀಯರಿಗೆ ಕ್ವಾರಂಟೈನ್ ಬಗ್ಗೆ ಯಾವುದೇ ಅಸಮ್ಮತಿಯಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್ ಹ್ಯಾಕ್ಲೆ ತಿಳಿಸಿದ್ದಾರೆ.
ಭಾರತ ತಂಡ ಬ್ರಿಸ್ಬೇನ್ ಟೆಸ್ಟ್‌ಗೆ ಇರುವ ಕಠಿಣ ಕ್ವಾರಂಟೈನ್ ನಿಯಮವನ್ನು ಒಪ್ಪಿಕೊಂಡಿದೆ. ನಾವು ಬಿಸಿಸಿಐ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಬಿಸಿಸಿಐ ನಮಗೆ ಬೆಂಬಲವಾಗಿದ್ದು, ಅವರು ಯಾವುದೇ ಬೇಡಿಕೆಯನ್ನು ಹೊಂದಿಲ್ಲ. ಈ ಹಿಂದೆ ನಿರ್ಧರಿಸಿರುವ ವೇಳಾಪಟ್ಟಿಯಂತೆ ಎರಡೂ ತಂಡಗಳು ಆಡಲು ಬಯಸಿವೆ ಎಂದು ಹಾಕ್ಲೆ ತಿಳಿಸಿದ್ದಾರೆ.