ಕೊಲೊಂಬೊ: ಭಾರತ ಎಮರ್ಜಿಂಗ್(U23) ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ನಡೆದ ಚೊಚ್ಚಲ ಮಹಿಳಾ ಎಮರ್ಜಿಂಗ್ ಏಷ್ಯಾ ಕಪ್ ಟ್ರೋಫಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ.
ನಾಲ್ಕು ತಂಡಗಳು ಭಾಗವಹಿಸಿದ್ದ ಈ ಏಷ್ಯಾ ಕಪ್ನಲ್ಲಿ ಭಾರತ ತಂಡ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಡಿಎಲ್ ನಿಯಮದನ್ವಯ 14 ರನ್ಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಾಸ್ ಗೆದ್ದ ಭಾರತ ಎಮರ್ಜಿಂಗ್ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಮಾಡಿದ 50 ಓವರ್ಗಳಲ್ಲಿ 9 ವಿಕೆಟ್ಗೆ 175 ರನ್ ಕಲೆಹಾಕಿತು. ತನುಶ್ರೀ ಸರ್ಕಾರ್ 47 ರನ್, ಸಿಮ್ರಾನ್ ಬಹದ್ದೂರ್ 34 ಹಾಗೂ ಮನಾಲಿ ದಕ್ಷಿಣಿ 18 ರನ್ ಗಳಿಸಿ 175 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಶ್ರೀಲಂಕಾ ಪರ ಕವಿತಾ ದಿಲ್ಹರಿ 3 ವಿಕೆಟ್, ಸಚಿನಿ ನಿಸನ್ಸಾಲ 2, ಸತ್ಯ ಸಂದೀಪನಿ, ಉಮೇಶ ತಿಮಶಿನಿ, ಮದುಶಿಕ ಮೆತಟಾನಂದ ತಲಾ ಒಂದು ವಿಕೆಟ್ ಪಡೆದು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.
176 ರನ್ಗಳ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಎಮಿರ್ಜಿಂಗ್ ಮಹಿಳಾ ತಂಡ 43 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಮಳೆ ಬಂದಿತ್ತು. ನಂತರ ಡಿಎಲ್ ನಿಯಮದನ್ವಯ 149 ರನ್ಗಳ ಟಾರ್ಗೆಟ್ ನೀಡಲಾಗಿತ್ತು.
ಆದರೆ ಶ್ರೀಲಂಕಾ ತಂಡ 34.3 ಓವರ್ಗಳಲ್ಲಿ 135 ರನ್ಗಳಿಗೆ ಆಲೌಟ್ ಆಗುವ ಮೂಲಕ 14 ರನ್ಗಳ ಸೋಲನುಭವಿಸಿತು. ಶ್ರೀಲಂಕಾ ಪರ ನಾಯಕಿ ಹರ್ಷಿತಾ ಮಾದವಿ 39, ಲಿಹಿನಿ ಅಪ್ಸರಾ 22, ಮದುಶಿಕ ಮೆತಟಾನಂದ 25 ರನ್ ಗಳಿಸಿ ಹೋರಾಟ ನಡೆಸಿದರೂ ಸೋಲಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.