ಮುಂಬೈ: ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಟಿ20ಯಲ್ಲಿ ತಂಡ ಸೇರಿಕೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ತೊಡೆಸಂದು ನೋವಿಗೆ ತುತ್ತಾಗಿದ್ದು ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಕೊನೆಯ ಪಂದ್ಯದಲ್ಲಿ ಪ್ರಮುಖ ಎರಡು ವಿಕೆಟ್ ಪಡೆದಿದ್ದ ಭುವನೇಶ್ವರ್ ಕುಮಾರ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ತೊಡೆಸಂದು ನೋವು ಕಾಣಿಸಿಕೊಂಡಿತ್ತು. ಟೀಂ ಇಂಡಿಯಾದ ವೈದ್ಯಕೀಯ ಮಂಡಳಿ ಪರೀಕ್ಷೆ ನಡೆಸಿ, ಭುವನೇಶ್ವರ್ ಅವರಲ್ಲಿ ಮತ್ತೆ ಅಂಡವಾಯು ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಭುವಿಗೆ ಏಕದಿನ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಮುಂಬರುವ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಭುವನೇಶ್ವರ್ ಕುಮಾರ್ ಬದಲು ಮುಂಬೈನ ಶಾರ್ದುಲ್ ಠಾಕೂರ್ಗೆ ಅವಕಾಶ ನೀಡಲಾಗಿದೆ. ಈಗಾಗಲೇ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಕೂಡ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.