ವೆಲ್ಲಿಂಗ್ಟನ್: ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 165 ರನ್ಗಳ ಅಲ್ಪ ಮೊತ್ತ ಪೇರಿಸಿ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡು 216 ರನ್ ಗಳಿಸುವ ಮೂಲಕ 51 ರನ್ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆಟಗಾರರು ಕಿವೀಸ್ ದಾಳಿಗೆ ಪ್ರತಿರೋಧ ತೋರಲಿಲ್ಲ. ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಭಾರತ ತಂಡ 165 ರನ್ಗಳಿಗ್ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದಕ್ಕೆ ಮರುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಆರಂಭಿಕ ಆಘಾತ ನೀಡಿದ್ರು. ಕೇವಲ 11 ರನ್ ಗಳಿಸಿದ್ದ ಟಾಮ್ ಲಾಥಮ್, ಪಂತ್ಗೆ ಕ್ಯಾಚಿತ್ತು ನಿರ್ಗಮಿಸಿದ್ರು.
ಮತ್ತೊಂದೆಡೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಟಾಮ್ ಬ್ಲುಂಡೆಲ್ ಕೂಡ ಇಶಾಂತ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ರು. ಈ ವೇಳೆ ತಂಡಕ್ಕೆ ಆಸರೆಯಾದ ಅನುಭವಿ ರಾಸ್ ಟೇಲರ್ ಮತ್ತು ನಾಯಕ ಕೇನ್ ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. 25 ಓವರ್ಗಳ ಕಾಲ ಜೊತೆಯಾಗಿ ಬ್ಯಾಟ್ ಬೀಸಿದ್ರು.
ವಿಕೆಟ್ ನೀಡದೆ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಈ ಜೋಡಿಯನ್ನು ಇಶಾಂತ್ ಶರ್ಮಾ ಬೇರ್ಪಡಿಸಿದ್ರು. 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರಾಸ್ ಟೇಲರ್, ಇಶಾಂತ್ ಬೌಲಿಂಗ್ನಲ್ಲಿ ಪುಜಾರಗೆ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಈ ವೇಳೆ ತಾಳ್ಮೆಯ ಆಟವಾಡಿದ ನಾಯಕ ಕೇನ್ ವಿಲಿಯಮ್ಸನ್ ಅರ್ಧಶತಕ ಸಿಡಿಸಿದ್ರು.
ಕ್ರೀಸ್ ಕಟ್ಟಿಕೊಂಡು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ವಿಲಿಯಮ್ಸನ್(89) ಅವರನ್ನು ಮೊಹಮ್ಮದ್ ಶಮಿ ಪೆವಿಲಿಯನ್ ಸೇರಿಸಿದ್ರು. ಹೆನ್ರಿ ನಿಕೋಲಸ್ ಕೂಡ 17 ರನ್‌ಗಳಿಸಿ ಔಟ್ ಆದ್ರು. ಅಂತಿಮವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಕಿವೀಸ್ ತಂಡ 5 ವಿಕೆಟ್ ಕಳೆದುಕೊಂಡು 216 ರನ್ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 51 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಬಿ.ಜೆ.ವಾಟ್ಲಿಂಗ್ 14 ಮತ್ತು ಕಾಲಿನ್ ಡಿ ಗ್ರಾಂಡ್ಹೋಮ್ 4 ರನ್ ಗಳಿಸುವ ಮೂಲಕ ಮೂರನೆ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಇಶಾಂತ್ ಶರ್ಮ 3, ಮಹಮ್ಮದ್ ಶಮಿ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.