ವೆಲ್ಲಿಂಗ್ಟನ್:ನಾಳೆಯಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಟಗಾರರು ಕಠಿಣ ಆಭ್ಯಾಸ ನಡೆಸುತ್ತಿದ್ದಾರೆ.
ಇಗಾಗಲೆ ಕಿವೀಸ್ ನೆಲದಲ್ಲಿ ಟಿ-20 ಸರಣಿ ಗೆದ್ದು, ಏಕದಿನ ಸರಣಿಯಲ್ಲಿ ಸೋಲು ಕಂಡಿರುವ ಭಾರತ ತಂಡ ಟೆಸ್ಟ್ ಸರಣಿಯನ್ನ ಗೆಲ್ಲುವ ಯೋಜನೆ ಹಾಕಿಕೊಂಡಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಬಿದ್ದಿದ್ದು ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಪೃಥ್ವಿ ಶಾ ಅಥವಾ ಶುಬ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಆಟಗಾರರಿಂದ ಅಭ್ಯಾಸ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಈವರೆಗೆ ಆಡಿದ 7 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿದೆ. ಮೊದಲಿಗೆ ವೆಸ್ಟ್ ಇಂಡೀಸ್, ನಂತರ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳನ್ನು ಬಗ್ಗು ಬಡಿದಿರುವ ಭಾರತ ತಂಡ 2020ರಲ್ಲಿ ತನ್ನ ಮೊದಲ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಆಡಲಿದೆ.
ಇತ್ತ ತವರು ನೆಲದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನ ಸೋಲಿಸುವುದು ಅಷ್ಟು ಸುಲಭವಲ್ಲ. ಸದ್ಯ ಕಿವೀಸ್ ತಂಡವೆ ಈ ಟೆಸ್ಟ್ ಸರಣಿ ಗೆಲ್ಲುವ ಫೇವರಿಟ್ ತಂಡವಾಗಿದೆ. ನ್ಯೂಜಿಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ರಾಸ್ ಟೇಲರ್‌ಗೆ ನಾಳಿನದು 100ನೇ ಪಂದ್ಯ. ನಾಳೆ ಟೇಲರ್ ಮೈದಾನಕ್ಕೆ ಇಳಿದರೆ ಎಲ್ಲ ಮಾದರಿಯಲ್ಲೂ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿ ಅವರದಾಗಲಿದೆ. ಟಿ-20 ಕ್ರಿಕೆಟ್‌ನ 100ನೇ ಪಂದ್ಯವನ್ನೂ ಭಾರತದ ವಿರುದ್ಧವೇ ಆಡಿದ್ದರು.
ನ್ಯೂಜಿಲ್ಯಾಂಡ್ ತಂಡದ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಕೈಲ್ ಜೆಮೀಸನ್ ಟೆಸ್ಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಟ್ರೆಂಟ್ ಬೌಲ್ಟ್ ಟೆಸ್ಟ್ ತಂಡ ಸೇರಿಕೊಂಡಿದ್ದು, ಟಿಮ್ ಸೌಥಿ ಜೊತೆಯಲ್ಲಿ ವೇಗದ ಬೌಲಿಂಗ್‌ಗೆ ಶಕ್ತಿ ತುಂಬಲಿದ್ದಾರೆ.