ಪುಣೆ :ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ಹೆಸರಿನಲ್ಲಿರುವ ಮಹತ್ವದ ದಾಖಲೆಗಳನ್ನು ಮುರಿಯಲಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರದಿಂದ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಒಂದು ಶತಕ ಸಿಡಿಸಿದರೆ ಕೊಹ್ಲಿ(19) ತವರಿನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಸಚಿನ್ ಜತೆಗೆ ಹಂಚಿಕೊಳ್ಳಲಿದ್ದಾರೆ. ಕ್ರಿಕೆಟ್ ದಂತಕತೆ ಸಚಿನ್ ಭಾರತದಲ್ಲಿ ಏಕದಿನ ಮಾದರಿಯಲ್ಲಿ 20 ಶತಕ ದಾಖಲಿಸಿದ್ದಾರೆ.
ಇದಲ್ಲದೆ ನಾಯಕನಾಗಿಯೂ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಕೊಹ್ಲಿ ಮೂರು ಮಾದರಿಯಲ್ಲಿ 71 ಶತಕ ಸಿಡಿಸಿದ್ದಾರೆ. ನಾಯಕನಾಗಿ 41 ಶತಕ ಸಿಡಿಸಿರುವ ಅವರು, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.