ಅಹ್ಮದಾಬಾದ್: ಗುರುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಜಯ ಸಾಧಿಸಿದ ನಂತರ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಪಿಚ್ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದು, ಬ್ಯಾಟ್ಸ್ಮನ್ಗಳು ಸ್ಟ್ರೈಟ್ ಬಾಲ್ಗಳಿಗೆ ವಿಕೆಟ್ ಒಪ್ಪಿಸಿದರು, ಪಿಚ್ ಯಾವುದೇ ಕೆಟ್ಟ ವರ್ತನೆ ತೋರಿಲ್ಲ ಎಂದು ಹೇಳಿದ್ದಾರೆ.
ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್ಗಳ ಜಯ ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದುಕೊಂಡಿತು.
"ನಿಜ ಹೇಳಬೇಕೆಂದರೆ, ನಾನು ಬೇರೆ ಏನನ್ನೂ ಮಾಡಲಿಲ್ಲ, ನೀವು ಆ ರೀತಿಯ ಪಿಚ್‌ನಲ್ಲಿ ಆಡುತ್ತಿರುವಾಗ, ನೀವು ಕೆಲವು ಉದ್ದೇಶವನ್ನು ಹೊಂದಿರಬೇಕು ಮತ್ತು ರನ್ ಗಳಿಸಲು ಎದುರು ನೋಡಬೇಕು. ಚೆಂಡು ವಿಚಿತ್ರವಾಗಿ ತಿರುಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಪಾದಗಳನ್ನು ಬಳಸಿ ಆಡಲು ಪ್ರಯತ್ನಿಸಬೇಕು. ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಜೊತೆಗೆ ರನ್ ಗಳಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು." ಎಂದು ರೋಹಿತ್ ಗುರುವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಾನು ರನ್ಗಳಿಸಲು ನನ್ನಿಂದ ಸಾದ್ಯವಾದದ್ದನ್ನೆಲ್ಲಾ ಪ್ರಯತ್ನಿಸಿದೆ. ಒಳ್ಳೆಯ ಎಸೆತಗಳನ್ನು ಗೌರವಿಸಬೇಕು ಮತ್ತು ವಿಕೆಟ್ ಉಳಿಸಿಕೊಳ್ಳುವ ಬದಲು ರನ್ಗಳಿಸಬೇಕೆಂದು ನನ್ನ ಉದ್ದೇಶವಾಗಿತ್ತು. ಇದನ್ನೇ ನಾನು ಮಾಡಲು ಪ್ರಯತ್ನಿಸಿದೆ. ಆದರೆ ಪಿಚ್ ಆಸಕ್ತಿದಾಯಕವಾಗಿತ್ತು. ಇಂತಹ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ನಿಮ್ಮ ಮನಸ್ಸು ಗೊಂದಲಮುಕ್ತವಾಗಿರಬೇಕು. ಆದರೆ ಇಂದು ಎರಡು ತಂಡದ ಬ್ಯಾಟ್ಸ್ಮನ್ಗಳು ಸ್ಟ್ರೈಟರ್ ಎಸೆತಗಳಿಗೆ ವಿಕೆಟ್ ಒಪ್ಪಿಸಿದರು. ನಾವು ಕೂಡ ತಂಡವಾಗಿ ಬ್ಯಾಟಿಂಗ್ ಮಾಡುವಾಗ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಮೊದಲ ಇನ್ನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಆದರೆ ಪಿಚ್‌ನಲ್ಲಿ ಯಾವುದೇ ರಾಕ್ಷಸತನವಿರಲಿಲ್ಲ ಎಂಬುದಂತೂ ಸ್ಪಷ್ಟ ಎಂದು ಹಿಟ್ಮ್ಯಾನ್ ಹೇಳಿದ್ದಾರೆ.
ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್ನಲ್ಲಿ 96 ಎಸೆತಗಳಲ್ಲಿ 11 ಬೌಂಡರಿ ಸಹಿತ 66 ರನ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 25 ರನ್ಗಳಿಸಿದ್ದರು.