ಅಹಮದಾಬಾದ್:ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟಿ-20 ಪಂದ್ಯವು ಇಂದು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸರಣಿ ಉಳಿಸಿಕೊಳ್ಳಲು ವಿರಾಟ್ ಕೊಹ್ಲಿ ಬಳಗಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಈ ಹಿಂದಿನ ಮೂರು ಪಂದ್ಯಗಳಲ್ಲಿಯೂ ಟಾಸ್ ಜಯಿಸಿದ ತಂಡವೇ ಜಯಭೇರಿ ಗಳಿಸಿದೆ. ಎರಡು ಬಾರಿ ಟಾಸ್ ಗೆದ್ದ ಮಾರ್ಗನ್ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್ನಿಂದ ಆತಿಥೇಯರು ಜಯ ಸಾಧಿಸಿದ್ದರು. 5 ಪಂದ್ಯಗಳ ಸರಣಿಯಲ್ಲಿ ಇಂದು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯವು ಭಾರತ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಮೂರು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿ ಕೇವಲ ಒಂದು ರನ್ ಗಳಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಮೂರನೇ ಪಂದ್ಯದಲ್ಲಿ ನಾಯಕ ಕೊಹ್ಲಿ ಏಕಾಂಗಿ ಹೋರಾಟದ ನಡುವೆಯೂ ಸೋಲನುಭವಿಸಿತ್ತು.
ಪ್ರಮುಖವಾಗಿ ಇಂಗ್ಲೆಂಡ್ ವೇಗಿಗಳ ಎದುರು ಭಾರತದ ಬ್ಯಾಟ್ಸ್ಮನ್ಗಳು ರನ್ ಗಳಿಸುವಲ್ಲಿ ತಿಣುಕಾಡುತ್ತಿದ್ದಾರೆ. ಈ ಹಿಂದಿನ ಮೂರು ಪಂದ್ಯಗಳಲ್ಲಿ ವೇಗಿಗಳಾದ ಜೋಫ್ರಾ ಆರ್ಚರ್, ಮಾರ್ಕ್ ವುಡ್, ಕ್ರಿಸ್ ಜೋರ್ಡನ್ ಅವರನ್ನು ಎದುರಿಸುವಲ್ಲಿ ವಿಫಲರಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಪಂದ್ಯವು ಈ ಹಿಂದಿನಂತೆ ಸಾಯಂಕಾಲ 7 ಗಂಟೆಗೆ ಆರಂಭವಾಗಲಿದ್ದು, ಕೊಹ್ಲಿ ಪಡೆ ಗೆಲುವು ಪಡೆದು ಸರಣಿಯಲ್ಲಿ ಸಮಬಲ ಸಾಧಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ತಂಡಗಳು ಇಂತಿವೆ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ದೀಪಕ್ ಚಹರ್, ರಾಹುಲ್ ತೆವಾಟಿಯಾ, ರಾಹುಲ್ ಚಹರ್
ಇಂಗ್ಲೆಂಡ್:ಇಯಾನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್, ಜೇಸನ್ ರಾಯ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಆದಿಲ್ ರಶೀದ್, ರೀಸ್ ಟಾಪ್ಲೆ, ಕ್ರಿಸ್ ಜೋರ್ಡನ್, ಮಾರ್ಕ್ ವುಡ್, ಸ್ಯಾಮ್ ಕರನ್, ಟಾಮ್ ಕರನ್, ಸ್ಯಾಮ್ ಬಿಲಿಂಗ್ಸ್, ಜಾನಿ ಬೈರ್ಸ್ಟೊ, ಜೋಫ್ರಾ ಆರ್ಚರ್