ಸಿಡ್ನಿ:ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ ಭಾರತ ವಿರುದ್ಧದ 3ನೇ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅವರು ಮರಳುತ್ತಿರುವುದರಿಂದ ತಂಡದ ಬಲ ಹೆಚ್ಚಾಗಲಿದೆ ಮತ್ತು ಅವರು ತಂಡದ ಇತರೆ 10 ಆಟಗಾರರಲ್ಲೂ ಉತ್ಸಾಹ ಮತ್ತು ಶಕ್ತಿಯನ್ನು ತುಂಬಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ತಿಳಿಸಿದ್ದಾರೆ.
ಗಾಯದ ಕಾರಣ ಭಾರತದ ವಿರುದ್ಧ ತವರಿನಲ್ಲಿ ನಡೆದ ಬಹುಪಾಲು ಪಂದ್ಯಗಳನ್ನು ವಾರ್ನರ್ ತಪ್ಪಿಸಿಕೊಂಡಿದ್ದಾರೆ. ಅವರು 2ನೇ ಏಕದಿನ ಪಂದ್ಯದಲ್ಲಿ ತೊಡೆಸಂದು ಗಾಯಕ್ಕೆ ಒಳಗಾಗಿದ್ದರು. ನಂತರ 1 ಏಕದಿನ, 2 ಟಿ-20 ಹಾಗೂ 2 ಟೆಸ್ಟ್ ಪಂದ್ಯಗಳಿಂದ ಹೊರಗಿರಬೇಕಾಯಿತು. ಇದೀಗ ಚೇತರಿಸಿಕೊಂಡಿರುವ ಅವರು ಸಿಡ್ನಿಯಲ್ಲಿ ನಡೆಯುವ 3ನೇ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿದ್ದು, ತಂಡ ಕಳೆದ 2 ಪಂದ್ಯಗಳಲ್ಲಿ ಭಾರಿ ವೈಫಲ್ಯ ಅನುಭವಿಸಿರುವ ಆರಂಭಿಕ ಸ್ಲಾಟ್ಗೆ ಬಲ ಬಂದಿದೆ ಎಂದು ನಾಯಕ ಪೇನ್ ತಿಳಿಸಿದ್ದಾರೆ.