ಸಿಡ್ನಿ: ಸುದೀರ್ಘ ವಿಶ್ರಾಂತಿ ಬಳಿಕ ತನ್ನ ಮೊದಲ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತಕ್ಕೆ ಗಾಯದ ಸಮಸ್ಯೆ ಬೆಂಬಿಡದ ಭೂತವಾಗಿ ಕಾಡುತ್ತಿದೆ. ಸರಣಿಗೂ ಮೊದಲೇ ಟಾಪ್ ಆಟಗಾರರು ಇಂಜುರಿಗೆ ತುತ್ತಾದರೆ, ಇದೀಗ ತಂಡದಲ್ಲಿರುವ ಆಟಗಾರರು ಒಬ್ಬಬ್ಬರಾಗಿ ಗಾಯದ ಪಟ್ಟಿಗೆ ಸೇರಿಕೊಳ್ಳುತ್ತಿರುವುದು ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಸೀಸ್ ಪ್ರವಾಸಕ್ಕೂ ಮೊದಲು 2018-19ರಲ್ಲಿ ಟೆಸ್ಟ್ ಸರಣಿ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಐಪಿಎಲ್ ವೇಳೆ ಗಾಯಗೊಂಡು ಪ್ರವಾಸದಿಂದಲೇ ಹೊರಬಿದ್ದರು. ನಂತರ ಟೆಸ್ಟ್ ಸರಣಿ ಆರಂಭದಲ್ಲಿ ಮೊಹಮ್ಮದ್ ಶಮಿ, ನಂತರ ಉಮೇಶ್ ಯಾದವ್ ಕೂಡ ಗಾಯಕ್ಕೆ ಒಳಗಾಗಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.
3ನೇ ಟೆಸ್ಟ್ಗೂ ಮುನ್ನ ಟೆಸ್ಟ್ ಕ್ರಿಕೆಟ್ಗೆ ಮರಳಲು ಕಾಯುತ್ತಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅಭ್ಯಾಸದ ವೇಳೆ ಮಣಿಕಟ್ಟು ಗಾಯಕ್ಕೆ ಒಳಗಾಗಿ 3 ವಾರಗಳ ಕಾಲ ವಿಶ್ರಾಂತಿಗೆ ತೆರಳಿದ್ದಾರೆ. ಅರ್ಧ ತಂಡದಷ್ಟು ಮಂದಿಯನ್ನು ಈಗಾಗಲೇ ಕಳೆದುಕೊಂಡಿರುವ ಭಾರತ ತಂಡಕ್ಕೆ 3ನೇ ಟೆಸ್ಟ್ನ 3ನೇ ದಿನ ಮತ್ತಿಬ್ಬರು ಟಾಪ್ ಪ್ಲೇಯರ್ಗಳು ಬ್ಯಾಟಿಂಗ್ ನಡೆಸುವಾಗ ಗಾಯಗೊಂಡಿದ್ದಾರೆ.