ಸಿಡ್ನಿ: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಉತ್ಸಾಹದಲ್ಲಿ 10 ದಿನ ಕಳೆದಿರುವ ರಹಾನೆ ಬಳಗ ಗುರುವಾರ 3ನೇ ಟೆಸ್ಟ್ ಪಂದ್ಯವನ್ನಾಡಲಿದೆ. ಆರಂಭಿಕನಾಗಿ ಬಿಗ್ ಹಿಟ್ಟರ್ ರೋಹಿತ್ ಶರ್ಮಾ ತಂಡಕ್ಕೆ ಸೇರ್ಪಡೆಗೊಂಡಿರುವುದು ಮೂರನೇ ಟೆಸ್ಟ್‌ಗೆ ಭಾರತಕ್ಕೆ ಭರವಸೆ ತಂದುಕೊಟ್ಟಿದ್ದರೆ, ಭಾರತೀಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದರೂ ಸಹ ಈ ಕ್ರೀಡಾಂಗಣದಲ್ಲಿ ಭಾರತೀಯರು 6 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಬಂದಿರುವ ಏಕೈಕ ಗೆಲುವು ಕೂಡ 42 ವರ್ಷಗಳ ಹಿಂದೆ ಎನ್ನುವುದು ವಾಸ್ತವ.
ಭಾರತ ಸಿಡ್ನಿ ಟೆಸ್ಟ್ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದರೆ ಬಾರ್ಡರ್ ಗಾವಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇನಾದರೂ ನಿಜವಾದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ರಹಾನೆ ಬಳಗದಿಂದ ಅತ್ಯುತ್ತಮ ಮೈಲುಗಲ್ಲಾಗಿ ಉಳಿದುಕೊಳ್ಳಲಿದೆ. ಅತ್ಯುತ್ತಮ ವೇಗದ ಬೌಲರ್ಗಳ ಅನುಪಸ್ಥಿತಿಯಲ್ಲಿ ಗೆದ್ದರಂತೂ ಈ ನೆನಪು ವಿಶೇಷವಾಗಿ ಉಳಿದುಕೊಳ್ಳಲಿದೆ.
ಹಿಂದೆಂದಿಗಿಂತಲೂ ಬಲಹೀನವಾಗಿ ಕಾಣುತ್ತಿರುವ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳನ್ನು ಭಾರತೀಯ ಬೌಲರ್ಗಳು ಬೆದರಿಸುತ್ತಿದ್ದಾರೆ. ಅದರಲ್ಲೂ ಸ್ಟೀವ್ ಸ್ಮಿತ್‌ರಂಥ ಸ್ಟಾರ್ ಬ್ಯಾಟ್ಸ್ಮನ್ ಭಾರತದ ಬೌಲಿಂಗ್ ಎದುರು ಮಂಕಾಗಿ ಹೋಗಿದ್ದಾರೆ. ಆದರೆ 3ನೇ ಪಂದ್ಯದಲ್ಲಿ ಉಮೇಶ್ ಯಾದವ್ ಅನುಪಸ್ಥಿತಿಯಲ್ಲಿ ಭಾರತ ನವ್ದೀಪ್ ಸೈನಿಯನ್ನು ಕಣಕ್ಕಿಳಿಸುತ್ತಿದೆ. ಈ ಪಂದ್ಯದಲ್ಲಿ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಸಿರಾಜ್ ಹಾಗೂ ನಾಳೆ ಪದಾರ್ಪಣೆ ಮಾಡುತ್ತಿರುವ ನವದೀಪ್ ಸೈನಿಯನ್ನು ತನ್ನ ಜೊತೆಯಲ್ಲಿ ಮುನ್ನಡೆಸುವ ಜವಾಬ್ದಾರಿ ಜಸ್ಪ್ರೀತ್ ಬುಮ್ರಾ ಹೆಗೆಲ ಮೇಲೇರಿದೆ.
ಆದರೆ ಸ್ಮಿತ್ ವಿಭಾಗದಲ್ಲಿ ಟೂರ್ನಿಯಲ್ಲಿ 10 ವಿಕೆಟ್ ಪಡೆದಿರುವ ಅನುಭವಿ ಅಶ್ವಿನ್ ಮತ್ತು ಜಡೇಜಾ ಅತ್ಯುತ್ತಮ ಫಾರ್ಮ್ನಲ್ಲಿರುವುದರಿಂದ ಹೊಸಬರಿಗೆ ಹೆಚ್ಚೇನು ಸಮಸ್ಯೆಯಾಗುವುದಿಲ್ಲ ಎಂದು ಹೇಳಬಹುದಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ನೋಡುವುದಾದರೆ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಜೊತೆಗೆ ವಿದೇಶಿ ಪಿಚ್ನಲ್ಲಿ ಆರಂಭಿಕನಾಗಿ ಸಾಮರ್ಥ್ಯ ಸಾಬೀತುಪಡಿಸಲು ರೋಹಿತ್ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ನಂತರ ಇದೇ ಮೊದಲ ಸ್ಪರ್ಧಾತ್ಮಕ ಪಂದ್ಯ ಹಾಗೂ ವರ್ಷದ ನಂತರ ಮೊದಲ ಟೆಸ್ಟ್ ಪಂದ್ಯವಾಗಿದೆ.
ಎರಡು ವಾರಗಳ ಕ್ವಾರಂಟೈನ್ ನಂತರ ತಂಡವನ್ನು ಸೇರಿಕೊಂಡು ಉಪನಾಯಕನ ಜವಾಬ್ದಾರಿ ನಿರ್ವಹಿಸಲು ಸಜ್ಜಾಗಿರುವ ರೋಹಿತ್ ಶರ್ಮಾ ಮಂಗಳವಾರ ನೆಟ್ಸ್ನಲ್ಲಿ ಅಶ್ವಿನ್, ಸಿರಾಜ್ ಮತ್ತು ಸೈನಿ ಬೌಲಿಂಗ್ಗೆ ಅತ್ಯುತ್ತಮವಾಗಿ ಬ್ಯಾಟಿಂಗ್ ಆಡುವ ಮೂಲಕ ಆತ್ಮವಿಶ್ವಾಸದಲ್ಲಿದ್ದಾರೆ. ಅಲ್ಲದೇ ತಂಡಕ್ಕೆ ಸೇರಿಕೊಳ್ಳುವುದರಿಂದ ಬ್ಯಾಟಿಂಗ್ ವಿಭಾಗದಲ್ಲಷ್ಟೇ ಅಲ್ಲದೆ, ಇತರೆ ಆಟಗಾರರಿಗೂ ಅವರು ಉತ್ಸಾಹ ತುಂಬಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ನಾಯಕ ರಹಾನೆ ಕೂಡ ಉಲ್ಲೇಖಿಸಿದ್ದಾರೆ.
ಸಿಡ್ನಿ ಟೆಸ್ಟ್ ಸುನೀಲ್ ಗಾವಸ್ಕರ್, ರವಿಶಾಸ್ತ್ರಿ, ಸಚಿನ್ ತೆಂಡೂಲ್ಕರ್ ಅಂತಹ ಬ್ಯಾಟ್ಸ್ಮನ್ಗಳಿಗೆ ನೆಚ್ಚಿನದ್ದಾಗಿದೆ. ಪ್ರಸ್ತುತ ತಂಡದಲ್ಲಿರುವ ಪೂಜಾರ ಮತ್ತು ರಿಷಭ್ ಪಂತ್ ಕೂಡ ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.
ಗಿಲ್ ಮತ್ತು ರೋಹಿತ್ ಉತ್ತಮ ಆರಂಭ ನೀಡಿದರೆ ಪೂಜಾರ ಮೇಲಿನ ಒತ್ತಡ ಕಡಿಮೆಯಾಗಿ ತಮ್ಮ ನೈಜ ಆಟವನ್ನು ತೋರಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಉಳಿದಂತೆ ರಹಾನೆ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಕಳೆದ ಪಂದ್ಯದಲ್ಲಿ ಸ್ಟಾರ್ಕ್, ಕಮ್ಮಿನ್ಸ್ ಹೇಜಲ್ವುಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿರುವುದರಿಂದ 3ನೇ ಟೆಸ್ಟ್ನಲ್ಲೂ ಇದೇ ಪ್ರದರ್ಶನವನ್ನು ಅವರಿಂದ ನಿರೀಕ್ಷಿಸಬಹುದಾಗಿದೆ.
ಆಸ್ಟ್ರೇಲಿಯಾ ತಂಡದ ಆರಂಭಿಕರು ಸತತ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಶೇ 70 ರಷ್ಟು ಫಿಟ್ ಇರುವ ವಾರ್ನರ್ರನ್ನು ಬಲವಂತವಾಗಿ ಕಣಕ್ಕಿಳಿಸಲು ಮುಂದಾಗಿದೆ. ವಾರ್ನರ್ ತಂಡಕ್ಕೆ ಆಗಮಿಸುವುದರಿಂದ ತಂಡದ ಬ್ಯಾಟಿಂಗ್ ಜೊತೆಗೆ ಮೈದಾನದಲ್ಲಿ ಎಲ್ಲಾ ಆಟಗಾರರಗಲ್ಲೂ ಆತ್ಮವಿಶ್ವಾಸ ತುಂಬಲು ನೆರವಾಗಬಲ್ಲರು ಎಂದು ನಾಯಕ ಟಿಮ್ ಪೇನ್ ಬುದವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆತಿಥೇಯ ತಂಡ ಆರಂಭಿಕ ಸ್ಥಾನದ ಬದಲಾವಣೆಯೊಂದನ್ನು ಬಿಟ್ಟರೆ ಕಳೆದ ಪಂದ್ಯದಲ್ಲಿದ್ದ ಬಹುತೇಕ ಎಲ್ಲಾ ಆಟಗಾರರನ್ನು ಸಿಡ್ನಿಯಲ್ಲಿ ಕಣಕ್ಕಿಳಿಸಲಿದೆ ಎನ್ನಲಾಗಿದೆ.