ಬೆಂಗಳೂರು: ಇದೇ ಫೆಬ್ರವರಿ 27 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯ 2ನೇ ಪಂದ್ಯ ನಡೆಯಲಿದ್ದು, ಕೆಎಸ್ಸಿಎ ಟಿಕೆಟ್ ದರವನ್ನು ಪ್ರಕಟಿಸಿದೆ.
ಬ್ಯಾಟಿಂಗ್ ಸ್ನೇಹಿಯಾಗಿರುವ ಈ ಪಿಚ್ನಲ್ಲಿ ರನ್ ಮಳೆಯೇ ಹರಿಯುವ ಸಾಧ್ಯತೆ ಇದ್ದು, ಈ ಪಂದ್ಯವನ್ನ ಕಣ್ತುಂಬಿಕೊಳ್ಳಬೇಕಾದವರು ತಮಗೆ ಸಾಧ್ಯವಾದ ಬೆಲೆಯಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಕೆಎಸ್ಸಿಎ 3 ವಿಭಾಗಗಳಲ್ಲಿ ಟಿಕೆಟ್ ದರ ನಿಗದಿಪಡಿಸಿದೆ. ಕನಿಷ್ಠ 750 ರಿಂದ ಗರಿಷ್ಠ 10 ಸಾವಿರ ರೂಪಾಯಿವರೆಗೆ ದರ ನಿಗದಿಪಡಿಸಲಾಗಿದೆ. ಇಂದಿನಿಂದ ಅನ್ಲೈನ್ ಬುಕಿಂಗ್ ಪ್ರಾರಂಭವಾಗಲಿದೆ. ಇನ್ನು ಫೆ.19 ರಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನೇರವಾಗಿ ಟಿಕೆಟ್ ಮಾರಾಟ ಮಾಡಲಾಗುತ್ತದೆ.
ಜನರಲ್ ಸ್ಟ್ಯಾಂಡ್ಗೆ 750 ರೂಪಾಯಿ ದರ ನಿಗದಿ ಮಾಡಿದ್ದು ಆನ್ಲೈನ್ನಲ್ಲಿ ಒಬ್ಬರಿಗೆ ಒಂದು ಟಿಕೆಟ್ ಮಾತ್ರ ನೀಡಲಾಗುತ್ತದೆ. ಇನ್ನುಳಿದ ಸ್ಟ್ಯಾಂಡ್ಗಳಿಗೆ ಒಬ್ಬರು 2 ಟಿಕೆಟ್ ಪಡೆದುಕೊಳ್ಳಬಹುದು. ಕ್ರೀಡಾಂಗಣದ ಬಳಿ ಹೋಗಿ ಟಿಕಟ್ ಪಡೆಯುವವರಿಗೂ ಈ ಷರತ್ತು ಅನ್ವಯಿಸುತ್ತದೆ.
ಒಂದು ಹೈ ವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಈ ಪಂದ್ಯವನ್ನ ಕ್ರೀಡಾಂಗಣದಲ್ಲಿ ನೋಡಲು ಇಚ್ಛಿಸುವವರು ಇಂದೇ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳಿ.