ಮೆಲ್ಬೋರ್ನ್ (ಆಸ್ಟ್ರೇಲಿಯಾ): ಬುಧವಾರ ತಮ್ಮ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ನಂತರ ತಂಡದ ಸಹ ಆಟಗಾರರನ್ನು ಸೇರಿಕೊಂಡಿದ್ದ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಇಂದು ಮೈದಾನಕ್ಕಿಳಿದು ಬೆವರು ಸುರಿಸುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿರುವ ಹಿಟ್ಮ್ಯಾನ್ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಯುಎಇಯಲ್ಲಿ ನಡೆದ ಐಪಿಎಲ್ ಸಮಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಜನವರಿ 7 ರಿಂದ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದಾರೆ.
ಸೀಮಿತ ಓವರ್‌ಗಳ ಉಪನಾಯಕ ಇಂದು ಮೈದಾನಕ್ಕಿಳಿದು ಫೀಲ್ಡಿಂಗ್ ತರಬೇತಿ ಆರಂಭಿಸಿದ್ದಾರೆ. ರೋಹಿತ್ ಶರ್ಮಾ ಕ್ಯಾಚ್ ಹಿಡಿಯುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿರುವ ಬಿಸಿಸಿಐ, "ಎಂಜಿನ್ ಈಗ ತಾನೆ ಪ್ರಾರಂಭವಾಗಿದೆ" ಎಂದಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಸಿಡ್ನಿ ಮೈದಾನದಲ್ಲಿ ಜ.7ರಿಂದ 3ನೇ ಪಂದ್ಯ ಆರಂಭವಾಗಲಿದೆ.
ಸಿಡ್ನಿಯಲ್ಲಿ ಕೊರೊನಾ ಸೋಂಕಿನ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಭಯ ತಂಡಗಳು ಮೆಲ್ಬೋರ್ನ್ನಲ್ಲೆ ಉಳಿದುಕೊಂಡಿದ್ದು, ಪಂದ್ಯ ಆರಂಭಕ್ಕೂ ಕೆಲ ದಿನಗಳ ಮೊದಲು ಸಿಡ್ನಿ ತಲುಪಲಿವೆ.