ಸಿಡ್ನಿ (ಆಸ್ಟ್ರೇಲಿಯಾ): ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಆಸ್ಟ್ರೇಲಿಯಾಕ್ಕೆ ಆಗಮಿಸಿದರೆ ಟೆಸ್ಟ್ ಸರಣಿಯನ್ನು ಆಡುವ ಸಾಧ್ಯತೆಗಳು ಹೆಚ್ಚಾಗಬಹುದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಬೀಡುಬಿಟ್ಟಿದ್ದು, ನಾಳೆ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿದೆ. ರೋಹಿತ್ ಶರ್ಮಾ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಇಶಾಂತ್ ಶರ್ಮಾ ಕೂಡ ಎನ್‌ಸಿಎನಲ್ಲಿದ್ದು, ಟೆಸ್ಟ್ ಸರಣಿಯಲ್ಲಿ ಇವರಿಬ್ಬರು ಭಾಗವಹಿಸುವ ಬಗ್ಗೆ ಖಚಿತತೆ ಇಲ್ಲ.
ನಾಳೆ ನಡೆಯುವ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ ಭಾರತ-ಆಸೀಸ್ ಆಟಗಾರರು
"ರೋಹಿತ್ ಮತ್ತು ಇಶಾಂತ್ ಆಸ್ಟ್ರೇಲಿಯಾಕ್ಕೆ ಆಗಮಿಸಿದರೆ ಟೆಸ್ಟ್ ಪಂದ್ಯಗಳನ್ನು ಆಡುವ ಸಾಧ್ಯತೆ ಹೆಚ್ಚಾಗಲಿದೆ. ಐಪಿಎಲ್ ಸಮಯದಲ್ಲಿ ಗಾಯಗೊಂಡಿದ್ದ ವೃದ್ಧಿಮಾನ್ ಸಹಾ ನಮ್ಮೊಂದಿಗೆ ಇದ್ದಾರೆ. ಇಲ್ಲಿ ಅವರು ಚೇತರಿಕೆ ಕಾಣುತ್ತಿದ್ದು, ಮೊದಲ ಟೆಸ್ಟ್ ಆಡುವ ಸಾಧ್ಯತೆ ಇದೆ. ರೋಹಿತ್ ಮತ್ತು ಇಶಾಂತ್ ಶರ್ಮಾ ಕೂಡ ಅವರಂತೆಯೇ ಆಸ್ಟ್ರೇಲಿಯಾಕ್ಕೆ ಆಗಮಿಸಿದರೆ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿರಾಟ್ ತಿಳಿಸಿದ್ದಾರೆ.
"ಇದೀಗ ಇಬ್ಬರು ಆಟಗಾರರು ಲಭ್ಯವಾಗುತ್ತಾರೋ ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಅನಿಶ್ಚಿತತೆ ಇದೆ. ಅವರು ಇಲ್ಲಿದ್ದು ಸಹಾ ಅವರಂತೆಯೇ ಇಲ್ಲಿ ಚೇತರಿಕೆ ಕಾಣುತ್ತಿದ್ದರೆ ಖಂಡಿತವಾಗಿಯೂ ತುಂಬಾ ಅನುಕೂಲವಾಗುತ್ತಿತ್ತು" ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.