ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 22 ರನ್ಗಳಿಂದ ಸೋಲುಕೊಂಡಿದೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವೇಗಿ ನವದೀಪ್ ಸೈನಿ, ನಾನು ಔಟ್ ಆಗದೇ ಇದ್ದಿದ್ದರೆ ಟೀಂ ಇಂಡಿಯಾ ಸೋಲುತ್ತಿರಲಿಲ್ಲ ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಸೈನಿ, ನಾನು ಔಟ್ ಆದ ರೀತಿಯನ್ನ ವಿಡಿಯೋದಲ್ಲಿ ನೋಡಿದಾಗ ನನಗೆ ತುಂಬಾ ಬೇಸರವಾಯ್ತು. ಒಂದು ವೇಳೆ ನಾನು ಔಟ್ ಆಗದಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದಿದ್ದಾರೆ.
ನಾನು ಮತ್ತು ಜಡೇಜಾ ಅವರು ಕೊನೆಯವರೆಗೂ ಉಳಿಯಲು ಸಾಧ್ಯವಾಗಿದ್ದರೆ, ಗೆಲುವಿಗೆ ಹತ್ತಿರವಾಗಬಹುದು ಎಂದು ತಿಳಿದಿತ್ತು. ಆದ್ದರಿಂದ ನಾವು ಸಾಧ್ಯವಾದಷ್ಟು ಕೊಡುಗೆ ನೀಡುವ ಮೂಲಕ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೆವು. ಬೌಂಡರಿ ಹೊಡೆಯಲು ಸಾಧ್ಯವಾಗುವಂತ ಎಸೆತಗಳನ್ನ ಹೊಡೆಯಿರಿ. ಇಲ್ಲದಿದ್ದರೆ ಸಿಂಗಲ್ಸ್ ಅಥವಾ ಡಬಲ್ಸ್ ತೆಗೆದುಕೊಳ್ಳಿ, ತಾಳ್ಮೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಜಡೇಜಾ ಹೇಳಿದ್ದರು ಎಂದಿದ್ದಾರೆ.
ನಾನು ಬಹಳ ಸಮಯದ ನಂತರ ಬ್ಯಾಟಿಂಗ್ ಬಗ್ಗೆ ಯೋಚಿಸಿದೆ. ನಾನು ಬೌಂಡರಿ ಹೊಡೆದ ಕೂಡಲೇ ನನಗೆ ಶಾಕ್ ಆಯ್ತು ಎಂದಿದ್ದಾರೆ. ಇನ್ನು ನಮ್ಮ ಸಹಾಯಕ ಸಿಬ್ಬಂದಿ ರಘು ಎಂಬುವವರು ಬ್ಯಾಟಿಂಗ್ ಮಾಡಲು ನನಗೆ ಸಹಾಯ ಮಾಡುತ್ತಾರೆ. ಉತ್ತಮವಾಗಿ ಬ್ಯಾಟಿಂಗ್ ನಡೆಸುವಂತೆ ಪ್ರೇರೇಪಿಸುವುದಲ್ಲದೆ, ಯಾವಾಗಲೂ ನನ್ನ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾರೆ ಎಂದು ಸೈನಿ ಹೇಳಿದ್ದಾರೆ.
ಒಂಭತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ನವದೀಪ್ ಸೈನಿ ಕಿವೀಸ್ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದ್ರು. 49 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 45 ರನ್ ಸಿಡಿಸಿ ಔಟ್ ಆದ್ರು.