ಪುಣೆ: ಡಿಆರ್‌ಎಸ್ 'ಅಂಪೈರ್ಸ್ ಕಾಲ್' ನಿಯಮದ ಪರಿಕಲ್ಪನೆಯು ಉಳಿಯಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದೆ. ಬಾಲ್ ಟ್ರ್ಯಾಕಿಂಗ್ ತಂತ್ರಜ್ಞಾನವು ಶೇಕಡಾ 100 ರಷ್ಟು ಸರಿಯಾಗುವುದಿಲ್ಲ ಎಂದು ಸಮಿತಿ ಉಲ್ಲೇಖಿಸಿದೆ.
ಮುಂಬರುವ ವಾರದಲ್ಲಿ ನಿಗದಿಯಾಗಿರುವ ಆಡಳಿತ ಮಂಡಳಿಯ ಮುಖ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಶಿಫಾರಸು ಮಂಡಿಸಲಾಗುವುದು ಎನ್ನಲಾಗಿದೆ.
ವರದಿಯ ಪ್ರಕಾರ, ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ, ಆಂಡ್ರ್ಯೂ ಸ್ಟ್ರಾಸ್, ರಾಹುಲ್ ದ್ರಾವಿಡ್, ಮಹೇಲಾ ಜಯವರ್ಧನೆ, ಶಾನ್ ಪೊಲಾಕ್ ಮತ್ತು ಮ್ಯಾಚ್ ರೆಫರಿ ರಂಜನ್ ಮದುಗಲ್ಲೆ, ಅಂಪೈರ್ ರಿಚರ್ಡ್ ಇಲಿಂಗ್ವರ್ತ್ ಮತ್ತು ಮಿಕ್ಕಿ ಆರ್ಥರ್, ಸೇರಿದಂತೆ ಇತರ ಪಂದ್ಯದ ಅಧಿಕಾರಿಗಳು, ಪ್ರಸಾರಕರ ಅವರ ಸಲಹೆಗಳನ್ನು ಪಡೆದಿದೆ. ಸಮಿತಿಯು ಕೆಲವು ಚರ್ಚೆಯ ನಂತರ, 'ಅಂಪೈರ್ಸ್ ಕಾಲ್' ನಿಯಮವು ಉಳಿಯಬೇಕು ಎಂದು ನಿರ್ಧರಿಸಿದೆ.
ಓದಿ : 2ನೇ ಏಕದಿನ ಪಂದ್ಯದಿಂದ ಮಾರ್ಗನ್, ಸ್ಯಾಮ್ ಬಿಲ್ಲಿಂಗ್ಸ್ ಔಟ್..!?
'ಅಂಪೈರ್ಸ್ ಕಾಲ್' ಡಿಆರ್‌ಎಸ್ ಪ್ರಾರಂಭವಾದಾಗಿನಿಂದ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವು ಮಾಜಿ ಕ್ರಿಕೆಟಿಗರು ಮತ್ತು ಪ್ರಸ್ತುತ ಕ್ರಿಕೆಟರ್ಸ್ ಈ ಬಗ್ಗೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಕೆಲವು ಡಿಆರ್‌ಎಸ್ ತೀರ್ಪುಗಳ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.